ಪ್ರಧಾನ ಸುದ್ದಿ

ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಬಂಧಿತ ಕಿಂಗ್ ಪಿನ್ ಗಳು ಏ.13ರವರೆಗೆ ಸಿಐಡಿ ವಶಕ್ಕೆ

Lingaraj Badiger
ಬೆಂಗಳೂರು: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಸೋಮವಾರ ಬಂಧನಕ್ಕೊಳಗಾಗಿರುವ ಸಚಿವರೊಬ್ಬರ ವಿಶೇಷ ಅಧಿಕಾರಿ ಸೇರಿದಂತೆ ಪ್ರಮುಖ ಮೂವರು ಆರೋಪಿಗಳನ್ನು ಏಪ್ರಿಲ್ 13ರ ವರೆಗೆ ಸಿಐಡಿ ವಶಕ್ಕೆ ನೀಡಲಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆಯ ದೊಡ್ಡ ಜಾಲವನ್ನು ಭೇದಿಸಿದ್ದ ಸಿಐಡಿ ನಿನ್ನೆ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರ ವಿಶೇಷ ಅಧಿಕಾರಿ ಓಬಳ್ ರಾಜ್, ಬೆಂಗಳೂರಿನ ವಿಜಯನಗರದಲ್ಲಿರುವ ಕೇಂಬ್ರಿಡ್ಜ್ ಕಾಲೇಜ್ ನ ದೈಹಿಕ ಶಿಕ್ಷಕ ಹಾಗೂ ಎಲ್ಐಸಿ ಏಜೆಂಟ್ ಸಹ ಆಗಿರುವ ಮಂಜುನಾಥ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿ ರುದ್ರಪ್ಪ ಎಂಬುವವರನ್ನು ಬಂಧಿಸಿದ್ದರು.
ಬಂಧಿತ ಆರೋಪಿಗಳನ್ನು ಸಿಐಡಿ ಇಂದು 7ನೇ ಎಸಿಎಂಎಂ ಕೋರ್ಟ್ ಹಾಜರುಪಡಿಸಿದರು, ವಿಚಾರಣೆ ನಡೆಸಿದ ಕೋರ್ಟ್, ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಏಪ್ರಿಲ್ 13ರವರೆಗೆ ಸಿಐಡಿ ವಶಕ್ಕೆ ನೀಡಿದೆ.
ಮಾರ್ಚ್ 21ರಂದು ಸೋರಿಕೆಯಾದ ಮೊದಲ ಪ್ರಶ್ನೆ ಪತ್ರಿಕೆ ಮಂಜುನಾಥ್ ಗೆ ರವಾನೆಯಾಗಿದ್ದು, ಅದನ್ನು ಆತ ಸಚಿವರ ವಿಶೇಷ ಅಧಿಕಾರಿಗೆ 10 ಲಕ್ಷ ರುಪಾಯಿಗೆ ಮಾರಾಟ ಮಾಡಿದ್ದ. ನಂತರ ಓಬಳ್ ರಾಜ್ ನಿಂದ ಪ್ರಶ್ನೆ ಪತ್ರಿಕೆ ಪಡೆದ ರುದ್ರಪ್ಪ ಅದನ್ನು ವಾಟ್ಸಪ್ ಹಾಗೂ ಇ-ಮೇಲ್ ಮೂಲಕ ವಿದ್ಯಾರ್ಥಿಗಳಿಗೆ ಕಳುಹಿಸಿದ್ದಲ್ಲದೆ ಕಾಲೇಜ್ ಹಾಗೂ ಟ್ಯುಟೋರಿಯಲ್ಸ್ ಗಳಿಗೆ ಮಾರಾಟ ಮಾಡಿದ್ದಾರೆ ಎಂದು ಸಿಐಡಿ ತಿಳಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ದಂಧೆಯು ಹಲವು ವರ್ಷಗಳಿಂದ ನಡೆಯುತ್ತಿದ್ದು, ಅದರಲ್ಲಿ ಹಲವು ಟ್ಯೂಟೋರಿಯಲ್‌ಗಳು ಉಪನ್ಯಾಸಕರು ಭಾಗಿಯಾಗಿರುವ ಮಾಹಿತಿ ನೀಡಿದ್ದಾರೆ, ಅದನ್ನು ಆಧರಿಸಿ ಕಾರ್ಯಾಚರಣೆ ನಡೆಸಿರುವ ಸಿಐಡಿ ಅಧಿಕಾರಿಗಳು ಸೇರಿದಂತೆ ಹಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ.
ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಗುಬ್ಬಿ ತಾಲ್ಲೂಕಿನ ಕಾಗೇರಿಯ ಶಿವಕುಮಾರ್ ಅಲಿಯಾಸ್ ಶಿವಕುಮಾರಸ್ವಾಮಿ ಪ್ರಮುಖ ಪಾತ್ರವಹಿಸಿರುವುದು ಪತ್ತೆಯಾಗಿದೆ. ಹಲವು ವರ್ಷಗಳಿಂದ ದಂಧೆ ನಡೆಸುತ್ತಿರುವ ಈತ ಮೊದಲು ಉಪನ್ಯಾಸಕನಾಗಿರುವುದು ಗೊತ್ತಾಗಿದ್ದು ತಲೆ ಮರೆಸಿಕೊಂಡಿರುವ ಆತನಿಗಾಗಿ ಸಿಐಡಿ ತೀವ್ರ ಶೋಧ ನಡೆಸುತ್ತಿದೆ.
SCROLL FOR NEXT