ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯ ಬಿಜೆಪಿ ಸಾರಥ್ಯ ನೀಡಿರುವುದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು, ಬಿಜೆಪಿ ರಾಜ್ಯಾಧ್ಯಕ್ಷರು ಯಾರಾಗುತ್ತಿದ್ದಾರೆ ಎನ್ನುವುದು ಈಗ ರ್ಚಚಿಸಬೇಕಾದ ವಿಚಾರವೇ ಅಲ್ಲ. ಕೇಂದ್ರ ಸರ್ಕಾರ ಮೊದಲು ರಾಜ್ಯದ ಬರ ಪರಿಸ್ಥಿತಿಗೆ ಸ್ಪಂದಿಸಲಿ ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪನವರೇ ಆಗಲಿ ಅಥವಾ ಬೇರಿನ್ನಾರೇ ಆಗಲಿ, ಅದು ಮುಖ್ಯವಲ್ಲ. ಕರ್ನಾಟಕದ ಬಹುತೇಕ ಜಿಲ್ಲೆಗಳು ಇಂದು ಬರ ಸಮಸ್ಯೆಯಿಂದ ತತ್ತರಿಸುತ್ತಿವೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಇಂಥ ರಾಜ್ಯಗಳಿಗೆ ನೆರವು ನೀಡಬೇಕು. ಈ ಬಗ್ಗೆ ಬಿಜೆಪಿ ಗಮನ ಕೊಡಬೇಕಿದೆ ಎಂದು ಖರ್ಗೆ ಹೇಳಿದ್ದಾರೆ.
ಈ ಕುರಿತು ಎಎನ್ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಅವರು, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಇಂದು ಸಂಕಷ್ಟದಲ್ಲಿವೆ. ಬರ ಪರಿಸ್ಥತಿ ಎದುರಿಸುತ್ತಿವೆ. ಆದರೆ ಕೇಂದ್ರ ಸರ್ಕಾರ ಕರ್ನಾಟಕ ಕೇಳಿದ ಅರ್ಧದಷ್ಟು ಪರಿಹಾರ ಧನವನ್ನು ನೀಡಿಲ್ಲ. ಮೊದಲು ಬರ ಪರಿಸ್ಥಿತಿಯಲ್ಲಿರುವ ಜಿಲ್ಲೆಗಳ ಜನತೆಗೆ ಸ್ಪಂದಿಸಲು ಮುಂದಾಗಲಿ ಎಂದಿದ್ದಾರೆ.