ಲಕನೌ: ಎನ್ ಐ ಎ ಅಧಿಕಾರಿ ತನ್ಜಿಲ್ ಅಹ್ಮದ್ ಅವರ ಹತ್ಯೆಯ ಪ್ರಮುಖ ರೂವಾರಿ ಎಂದು ಆರೋಪಿಸಲಾಗಿರುವ ಮುನೀರ್ ಬಗ್ಗೆ ಮಾಹಿತಿ ನೀಡಿದವರಿಗೆ ಉತ್ತರ ಪ್ರದೇಶ ಪೊಲೀಸರು ೨ ಲಕ್ಷ ಬಹುಮಾನ ಘೋಷಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಈ ಹತ್ಯೆಯಲ್ಲಿ ಇನ್ನಿಬ್ಬರು ಆರೋಪಿಗಳಾದ ರೆಯಾನ್ ಮತ್ತು ಜೈನುಲ್ ರನ್ನು ಬಂಧಿಸಲಾಗಿದ್ದು, ಮುನೀರ್ ಇನ್ನು ತಲೆಮರೆಸಿಕೊಂಡಿದ್ದಾನೆ.
ಎ ಎಂ ಯು ವಿದ್ಯಾರ್ಥಿ ಹತ್ಯೆ, ಬ್ಯಾಂಕ್ ದರೋಡೆ ಇತ್ಯಾದಿ ಪ್ರಕರಣಗಳಲ್ಲಿ ಬೇಕಾಗಿರುವ ಈ ಶಾರ್ಪ್ ಶೂಟರ್ ಮುನೀರ್ ಬಗ್ಗೆ ಸುಳಿವಿಗೆ ಈ ಹಿಂದೆ ಪೊಲೀಸ್ ಮಹಾನಿರ್ದೇಶಕ ಜಾವೇದ್ ಅಹ್ಮದ್ ೫೦೦೦೦ ರೂ ಬಹುಮಾನ ಘೋಷಿಸಿದ್ದರು.
ಏಪ್ರಿಲ್ 13 ರಂದು ನಡೆದ ಈ ಹತ್ಯೆಯ ನಂತರ ಬಿಜ್ನುರಿನ ಮುನೀರ್ ಕಾಣೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ಪ್ರಕರಣವನ್ನು ಭೇದಿಸಿರುವುದಾಗಿ ಹೇಳಿರುವ ಪೊಲೀಸರು, ನವದೆಹಲಿಯಲ್ಲಿನ ಅಂಗಡಿ ಆಸ್ತಿಯ ಬಗೆಗಿನ ವಿವಾದದಲ್ಲಿ ಅಹ್ಮದ್ ಅವರನ್ನು ಇವರು ಹತ್ಯೆ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಕೊಲೆಗೆ ಕಾರಣ ಅಥವಾ ಕೊಲೆಗೆ ಬಳಸಿದ ಶಸ್ತ್ರಾಸ್ತ್ರ, ಮತ್ತು ಬಳಸಿದ ವಾಹನವನ್ನು ವಶಪಡಿಸಿಕೊಳ್ಳುವುದಕ್ಕೆ ವಿಫಲರಾಗಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಮೊಬೈಲ್ ಫೋನ್ ಬಳಸದ ಮುನೀರ್ ಗೋವ ಅಥವಾ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದ್ದು, ಅವನು ಸೆರೆ ಸಿಕ್ಕರೆ ಕೊಲೆಯ ಎಲ್ಲ ಕಾರಣವೂ ತಿಳಿಯಲಿದೆ ಎನ್ನುತ್ತಾರೆ ಪೊಲೀಸರು.