ಪ್ರತಿಭಟನೆ: ಪರಿಸ್ಥಿತಿ ತಿಳಿಗೊಳಿಸಿದ ಜಮ್ಮು ಕಾಶ್ಮೀರ ಪೊಲೀಸರು
ಶ್ರೀನಗರ: ವಿದ್ಯಾರ್ಥಿನಿಗೆ ಯೋಧ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರತಿಭಟನೆ ನಡೆಸುತ್ತಿದ್ದ ಸ್ಥಳೀಯರ ಮೇಲೆ ಭದ್ರಾತಾ ಸಿಬ್ಬಂದಿ ಗುಂಡು ಹಾರಿಸಿದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂದ್ವಾರದಲ್ಲಿ ಈ ಘಟನೆ ನಡೆದಿದೆ. ಸಾರ್ವಜನಿಕ ಶೌಚಾಲಯಕ್ಕೆ ವಿದ್ಯಾರ್ಥಿನಿ ತೆರಳಿದ್ದ ವೇಳೆ ಯೋಧ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ಈ ವೇಳೆ ದೇಶ ವಿರೋಧಿ, ಪರ ಸ್ವಾತಂತ್ರ್ಯ ಘೋಷಣೆಗಳನ್ನು ಕೂಗಿದ್ದಾರೆ. ಅಲ್ಲದೇ, ಮಿಲಿಟರಿ ಬಂಕರ್ ಗಳಿಗೆ ಕಲ್ಲಿನಿಂದ ದಾಳಿ ನಡೆಸಿ ನಂತರ ಬೆಂಕಿ ಹಚ್ಚಿದ್ದಾರೆ.
ಈ ಹಿನ್ನಲೆಯಲ್ಲಿ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಈ ವೇಳೆ ಇಬ್ಬರು ಯುವಕರು ಮೃತಪಟ್ಟಿದ್ದು, ಮಹಿಳೆ ಸೇರಿ ಮೂವರು ನಾಗರಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮೊಹಮ್ಮದ್ ಇಕ್ಬಾಲ್ ಮತ್ತು ನಯೀಮ್ ಕಾದಿರ್ ಭಟ್ ಮೃತಪಟ್ಟ ಯುವಕರು. ಇಕ್ಬಾಲ್ ಹಣೆಗೆ ಮತ್ತು ನಯೀಮ್ ಹೊಟ್ಟೆಗೆ ಗುಂಡು ತಗುಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಘಟನೆ ಪ್ರತಿಕ್ರಯಿಸಿರುವ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ಗುಂಡು ಹಾರಿಸಿರುವುದುತಪ್ಪು. ಗುಂಡು ಹಾರಿಸಿದ ಭದ್ರತಾ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ಡಿ ಎಸ್ ಹೂಡ ಅವರೊಂದಿಗೆ ಮುಖ್ಯಮಂತ್ರಿ ಮಾತುಕತೆ ನಡೆಸಿದ್ದಾರೆ. ಈಗಾಗಲೇ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಸೇನಾಧಿಕಾರಿ ತಿಳಿಸಿದ್ದಾರೆ.
ಇನ್ನು ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಅಶ್ರುವಾಯು ಸಿಡಿಸಿದ್ದಾರೆ. ಇಬ್ಬರು ಯುವಕರ ಸಾವಿಗೆ ಕಾರಣರಾದ ಯೋಧರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.