ಪ್ರಧಾನ ಸುದ್ದಿ

ಪಿಯು ಮೌಲ್ಯಮಾಪನ ಬಹಿಷ್ಕಾರ: ಎಂಎಲ್‍ಸಿಗಳತ್ತ ಚಪ್ಪಲಿ ಎಸೆದ ಉಪನ್ಯಾಸಕರು

Lingaraj Badiger
ಬೆಂಗಳೂರು: ರಾಜ್ಯ ಸರ್ಕಾರ ನಾಳೆಯಿಂದ ದ್ವಿತೀಯ ಪಿಯುಸಿ ಮೌಲ್ಯಮಾಪನ ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಂಡಿರುವ ಬೆನ್ನಲ್ಲೇ, ಮುಷ್ಕರನಿರತ ಉಪನ್ಯಾಸಕರು ವಿಧಾನ ಪರಿಷತ್ ಸದಸ್ಯರ ಮೇಲೆ ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆಯಿತು.
ವೇತನ ತಾರತಮ್ಯ ನಿವಾರಣೆ ಹಾಗೂ ಕುಮಾರ್ ನಾಯಕ್ ವರದಿ ಜಾರಿಗೆ ಆಗ್ರಹಿಸಿ ಮೌಲ್ಯ ಮಾಪನ ಬಹಿಷ್ಕರಿಸಿ ಪದವಿ ಪೂರ್ವ ಕಾಲೇಜ್ ಉಪನ್ಯಾಸಕರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಕಳೆದ 12 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಇಂದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಿಧಾನ ಪರಿಷತ್‌ ಸದಸ್ಯರಾದ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ , ಅರುಣ್‌ ಶಹಾಪುರ್‌, ಸಂಕನೂರ ಹಾಗೂ ಅಮರನಾಥ ಪಾಟೀಲ್ ಅವರಿಗೆ ಘೇರಾವ್‌ ಹಾಕಿ ,ಅವರ ಮೇಲೆ ಚಪ್ಪಲಿ ತೂರಿದರು.
ಈ ನಾಲ್ವರ ಎಂಎಲ್ ಸಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ ಉಪನ್ಯಾಸಕರು, ನಿಮ್ಮಿಂದ ನಮಗೆ ಯಾವುದೇ ಅನುಕೂಲ ಆಗಿಲ್ಲ. ನೀವು ಇಲ್ಲಿ ಬಂದು ಮಾತನಾಡುವುದು ಬೇಡ, ನೇರವಾಗಿ ವಿಧಾನಸೌಧದಲ್ಲಿ ಸಂಬಂಧಪಟ್ಟವರೊಂದಿಗೆ ಮಾತನಾಡಬೇಕು. ನೀವು ಇಲ್ಲಿಗೆ ಬರೋದೆ ಬೇಡ, ನೀವು ಕಣ್ಣೊರೆಸೋದು ಬೇಡ ಎಂದು ಹೇಳಿ ಮಾತನಾಡಲು ಅವಕಾಶ ಕೊಡದೆ ವಾಪಾಸ್ ಕಳುಹಿಸಿದರು.
ಉಪನ್ಯಾಸಕರ ಆಕ್ರೋಶ ಕಂಡು ಕೂಡಲೆ ನಾಲ್ವರು ಪರಿಷತ್‌ ಸದಸ್ಯರು ಸ್ಥಳದಿಂದ ವಾಪಾಸಾಗಲು ಮುಂದಾದರು. ಈ ವೇಳೆ ಚಪ್ಪಲಿಯೊಂದು ಪರಿಷತ್‌ ಸದಸ್ಯರತ್ತ ತೂರಿಬಂತು. ಆದರೆ ಯಾರಿಗೂ ಚಪ್ಪಲಿ ತಾಗಿಲ್ಲ.
SCROLL FOR NEXT