ಕಾಮಗಾರಿ ಪರಿಶೀಲಿಸುತ್ತಿರುವ ಸಿದ್ದರಾಮಯ್ಯ
ಬೀದರ್: ಬರ ಪರಿಹಾರ ಕಾಮಗಾರಿಗಳಿಗೆ ಸರ್ಕಾರದ ಬಳಿ ಹಣದ ಕೊರೆತೆ ಇಲ್ಲ. ಎಲ್ಲಾ ಜಿಲ್ಲಾಧಿಕಾರಿಗಳ ಬಳಿ ಸಾಕಷ್ಟು ಹಣವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.
ರಾಜ್ಯದಲ್ಲಿ ಬರ ಪರಿಸ್ಥಿತಿಯ ತೀವ್ರತೆ ಹೆಚ್ಚಿದ ಹಿನ್ನೆಲೆಯಲ್ಲಿ ಇಂದು ಪರಿಹಾರ ಕಾರ್ಯಗಳ ಪರಿಶೀಲನೆಗಾಗಿ ಸಿಎಂ ಬೀದರ್ ಗೆ ಭೇಟಿ ನೀಡಿದ್ದು, ಬೀದರ್ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕಡಿಯುವ ನೀರು, ಮೇವು ಹಾಗೂ ಉದ್ಯೋಗ ನೀಡಲು ಹಣದ ಕೊರತೆ ಇಲ್ಲ. ನೀರಿನ ಸಮಸ್ಯೆ ಇದ್ದರೆ ಕೂಡಲೇ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಸಾರ್ವಜನಿಕ ಕೊಳವೆ ಬಾವಿಯ ಪಂಪ್‍ಸೆಟ್ ಕಟ್ಟುಹೋದರೆ ತಕ್ಷಣ ದುರಸ್ಥಿ ಮಾಡಿಸಿ, ಜನರಿಗೆ ಕೂಡಿಯುವ ನೀರಿನ ತೊಂದರೆಯಾಗದೆಂತೆ ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸಿಎಂ ಖಡಕ್ ಸೂಚನೆ ನೀಡಿದರು.
ಇನ್ನು ಖಾಸಗಿಯರು ಹೆಚ್ಚಿನ ಬೆಲೆಗೆ ನೀರು ಪೂರೈಸುತ್ತಿದ್ದರೆ ಅವರ ಟ್ಯಾಂಕರ್ ಗಳನ್ನು ವಶಕ್ಕೆ ಪಡೆದು, ಸರ್ಕಾರದಿಂದ ಉಚಿತವಾಗಿ ನೀರು ಪೂರೈಕೆ ಮಾಡಲಾಗುವುದು ಎಂದರು. ಅಲ್ಲದೆ ಬರ ಕಾಮಗಾರಿಗಳಿಗೆ ಎಷ್ಟೇ ಹಣ ಖರ್ಚಾದರೂ ವೆಚ್ಚ ಮಾಡಲು ಸರ್ಕಾರ ಸಿದ್ಧವಿದೆ ಎಂದು ಸಿಎಂ ತಿಳಿಸಿದರು.
ಬೀದರ್ ನಲ್ಲಿ ಒಟ್ಟು 661 ಹಳ್ಳಿಗಳಿದ್ದು, ಅದರಲ್ಲಿ 373 ಹಳ್ಳಿಗಳ ನೀರಿನ ಸಮಸ್ಯೆ ಎದುರಿಸುತ್ತಿವೆ. ಈಗಾಗಲೇ ಅದಿಕಾರಿಗಳು 14 ಹಳ್ಳಿಗಳಿಗೆ ಟ್ಯಾಂಕ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ. ಇನ್ನುಳಿದ ಹಳ್ಳಿಗಳಿಗೆ ವಾರದಲ್ಲಿ ಒಂದು ಬಾರಿ ನೀರು ಬಿಡಲಾಗುತ್ತಿದೆ.
ಇನ್ನು ಕಲಬುರ್ಗಿಯಲ್ಲಿ ಇದೇ ಪರಿಸ್ಥಿತಿ ಎದುರಾಗಿದೆ. 5,875 ಕೊಳವೆ ಬಾವಿಗಳಿದ್ದು, ಅದರಲ್ಲಿ 2,674 ಬಾವಿಗಳಲ್ಲಿ ನೀರಿಲ್ಲ. 714 ಬೋರ್ ವೆಲ್ ಗಳಲ್ಲಿ ಕೇವಲ 245 ಬೋರ್ ವೆಲ್ ಗಳು ಕಾರ್ಯನಿರ್ಹವಹಿಸುತ್ತಿದೆ. 1,269 ಹಳ್ಳಿಗಳಿದ್ದು, 491 ಹಳ್ಳಿಗಳು ನೀರಿನ ಸಮಸ್ಯೆ ಎದುರಿಸುತ್ತಿವೆ ಎಂದು ವರದಿಯಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos