ನವದೆಹಲಿ: ಬೆಂಗಳೂರು ಸೇರಿದಂತೆ ದೇಶಾದ್ಯಂತ ನೂತನ ಭವಿಷ್ಯ ನಿಧಿ(ಪಿಎಫ್) ಕಾಯ್ದೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ನೂತನ ಕಾಯ್ದೆಯನ್ನು ಮೂರು ತಿಂಗಳ ಕಾಲ ತಡೆಹಿಡಿದಿದೆ.
ವ್ಯಾಪಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೌಕರ 58 ವರ್ಷದವರೆಗೆ ತನ್ನ ಪಿಎಫ್ ಹಣವನ್ನು ಹಿಂತೆಗೆದುಕೊಳ್ಳುವುದನ್ನು ನಿಷೇಧಿಸುವ ಪಿಎಫ್ ವಾಪಸಾತಿ ಮಿತಿಗಳನ್ನು ಬಿಗಿಗೊಳಿಸುವುದಕ್ಕೆ ಸಂಬಂಧಿಸಿದ ಪ್ರಕಟಣೆಯನ್ನು 2016ರ ಜುಲೈ 31ವರೆಗೆ ಮೂರು ತಿಂಗಳ ಕಾಲ ಸ್ಥಗಿತಗೊಳಿಸಲಾಗಿದೆ. ಈ ವಿಚಾರದ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಉದ್ಯೋಗದಾತನ ಭವಿಷ್ಯನಿಧಿ ವಂತಿಗೆ ಹಣವನ್ನು ಹಿಂತೆಗೆದುಕೊಳ್ಳುವುದರ ಮೇಲೆ ವಯೋಮಿತಿಯ ನಿರ್ಬಂಧ ಹೇರುವ ಕ್ರಮಕ್ಕೆ ರಾಷ್ಟ್ರಾದ್ಯಂತ ಹಲವು ಕಡೆಗಳಲ್ಲಿ ಕಾರ್ಮಿಕ ಸಂಘಟನೆಗಳಿಂದ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿರುವುದರ ಮಧ್ಯೆಯೇ ಸಚಿವರ ಈ ಪ್ರಕಟಣೆ ಹೊರಬಿದ್ದಿದೆ.
ಫೆಬ್ರುವರಿ 10ರಿಂದ ಜಾರಿಗೊಳಿಸಲು ಉದ್ದೇಶಿಸಲಾಗಿದ್ದ ನೂತನ ಪಿಎಫ್ ನೀತಿಯನ್ನು ವಿರೋಧದ ಹಿನ್ನೆಲೆಯಲ್ಲಿ ಬಳಿಕ ಏಪ್ರಿಲ್ 30ರವರೆಗೆ ಮುಂದೂಡಲಾಗಿತ್ತು. ಈ ನಿರ್ಧಾರದ ವಿರುದ್ಧ ನೌಕರರಿಂದ ‘ಆನ್ಲೈನ್ ಪ್ರಚಾರ ಅಭಿಯಾನ’ ನಡೆದಿತ್ತು.
ಸೋಮವಾರ ಹಲವೆಡೆಗಳಲ್ಲಿ ಪ್ರತಿಭಟನಕಾರರ ವಿರುದ್ಧ ಪೊಲೀಸರಿಂದ ಲಾಠಿ ಪ್ರಹಾರವಾಗಿದ್ದರೆ,ಇಂದು ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕಾರ್ಮಿಕರ ಪ್ರತಿಭಟನೆ ಉಗ್ರಸ್ವರೂಪಕ್ಕೆ ತಿರುಗಿ 6 ರಾಜ್ಯ ರಸ್ತೆಸಾರಿಗೆ ಬಸ್ಸುಗಳು ಬೆಂಕಿಗೆ ಆಹುತಿಯಾಗಿದ್ದು, ಇತರ ಹಲವು ವಾಹನಗಳು ಹಾನಿಗೊಂಡಿವೆ. ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ, ಪ್ರತಿಭಟನಕಾರರ ಮೇಲೆ ಲಾಠಿ ಪ್ರಹಾರ, ಆಶ್ರುವಾಯು, ಗಾಳಿಯಲ್ಲಿ ಗುಂಡು ಹಾರಾಟವೂ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics