ಬೆಂಗಳೂರು: ಪಿಎಫ್ ನೂತನ ನೀತಿ ವಿರೋಧಿ ಬೆಂಗಳೂರಿನ ಕಾರ್ಮಿಕರ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದಂತೆ ಬುಧವಾರ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಕೇಂದ್ರ ಸರ್ಕಾರದ ಪಿಎಫ್ ತಿದ್ದುಪಡಿ ನೀತಿ ವಿರೋಧಿಸಿ ನಗರದ ವಿವಿಧೆಡೆಯಲ್ಲಿ ಸೋಮವಾರ ಮತ್ತು ಮಂಗಳವಾರ ಕಾರ್ಮಿಕರು ನಡೆಸಿದ ಪ್ರತಿಭಟನೆ ವೇಳೆ ವ್ಯಾಪಕ ಹಿಂಸಾಚಾರ ಸಂಭವಿಸಿ ಅಪಾರ ಆಸ್ತಿ ಪಾಸ್ತಿ ಹಾನಿಯಾಗಿರುವ ಬಗ್ಗೆ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲ್ ಗೌಡ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸೋಮವಾರ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ಸಂಭವಿಸಿತ್ತು ,ಅದು ಮರು ದಿನವೂ ಮರುಕಳಿಸಿದೆ .ರಾಜ್ಯದಲ್ಲಿರುವ ಗುಪ್ತಚರ ಇಲಾಖೆ ಏನು ಮಾಡುತ್ತಿದೆ? ಗುಪ್ತಚರ ಇಲಾಖೆಯ ಮಾಹಿತಿಯೂ ನಿಮಗೆ ಇದ್ದಂತಿಲ್ಲ ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ಮಂಗಳೂರು ಹಾಗೂ ಮೈಸೂರು ಘಟನೆಗಳಿಂದ ನೀವು ಪಾಠ ಕಲಿತಿಲ್ಲ. ಸರ್ಕಾರದ ನಿರ್ಧಾರಗಳು ಕೇವಲ ಕಾಗದದ ಮೇಲೆ ಮಾತ್ರ ಇವೆ. ಹೀಗಾಗಿ ಬೆಂಗಳೂರಿನ ಹೆಬ್ಬಗೋಡಿ ಹಾಗೂ ಪೀಣ್ಯದಲ್ಲಿ ಮತ್ತೆ ಹಿಂಸಾಚಾರ ನಡೆದಿದೆ ಎಂದು ವೇಣುಗೋಪಾಲ್ ಗೌಡ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು, ಅಲ್ಲದೆ ಏಪ್ರಿಲ್ 18 ಹಾಗೂ 19ರ ಘಟನೆ ಮರುಕಳುಹಿಸಬಾರದು ಎಂದು ಎಚ್ಚರಿಸಿದ್ದಾರೆ.
ಇನ್ನು ಇದೇ ವೇಳೆ ಪೊಲೀಸ್ ನೇಮಕಾತಿ ವಿಳಂಬಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್, ಈ ಸಂಬಂಧ ಏಪ್ರಿಲ್ 23ರಂದು ಡಿಜಿ ಮತ್ತು ಐಜಿಪಿ ಖದ್ದು ಹಾಜರಿಗೆ ಹಾಗೂ ಪೊಲೀಸ್ ನೇಮಕಾತಿ ಸಂಬಂಧ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಿದೆ.
ಪೊಲೀಸ್ ಇಲಾಖೆಯಲ್ಲಿ ಶೇ.30ರಷ್ಟು ಹುದ್ದೆ ಖಾಲಿ ಉಳಿದಿರುವ ವಿಚಾರ ನೆನಪಿಸಿದ ನ್ಯಾಯಮೂರ್ತಿಗಳು ಏಕೆ ಹುದ್ದೆ ಖಾಲಿ ಇರಿಸಿಕೊಂಡಿದ್ದೀರಿ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಹಿಂಸಾಚಾರ ಘಟನೆಗಳು ನಡೆದಾಗ ಏಕೆ ಒಂದು ಸರ್ಕಾರದಿಂದ ಇನ್ನೊಂದು ಸರ್ಕಾರದ ಕಡೆ ಕೈತೋರಿಸುತ್ತೀರಿ? ನಿಮ್ಮಿಂದಾಗಿ ಸಾಮಾನ್ಯ ಜನರೇಕೆ ಹಿಂಸೆ ಅನುಭವಿಸಬೇಕು ?ಜನರ ಜೀವಕ್ಕೆ ಬೆಲೆಯಿಲ್ಲವೆ? ಜನರಿಗೆ ಮೂಲಭೂತ ಹಕ್ಕುಗಳಿಲ್ಲವೆ ಎಂದು ಸರ್ಕಾರವನ್ನು ನ್ಯಾಯಮೂರ್ತಿ ವೇಣುಗೋಪಾಲ್ ಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ.