ನೈನಿತಾಲ್: ರಾಷ್ಟ್ರಪತಿಗಳ ನಿರ್ಧಾರ ಕೂಡ ತಪ್ಪಾಗಬಹುದು ಎಂದಿರುವ ಉತ್ತರಾಖಂಡ್ ಹೈಕೋರ್ಟ್, ಉತ್ತರಾಖಂಡ್ ವಿಧಾನಸಭೆಯನ್ನು ವಜಾಗೊಳಿಸಿರುವ ರಾಷ್ಟ್ರಪತಿಗಳ ನಿರ್ಧಾರ ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ ಎಂದಿದ್ದಾರೆ.
ರಾಷ್ಟ್ರಪತಿಗಳು ತಮ್ಮ 'ರಾಜಕೀಯ ವಿವೇಕ'ದಿಂದ ಸಂವಿಧಾನದಲ್ಲಿರುವ ೩೬೫ನೇ ವಿಧಿಯನ್ನು ಉತ್ತರಾಖಾಂಡದಲ್ಲಿ ಹೇರಿದ್ದಾರೆ ಎಂಬ ಎನ್ ಡಿ ಎ ಸರ್ಕಾರದ ವಾದವನ್ನು ಗಮನಕ್ಕೆ ತಂದ ಮುಖ್ಯ ನ್ಯಾಯಾಧೀಶ ಕೆ ಎಂ ಜೋಸೆಫ್ ಮತ್ತು ನ್ಯಾಯಮೂರ್ತಿ ವಿ ಕೆ ಬಿಸ್ತ್ ಒಳಗೊಂಡ ಪೀಠ "ರಾಷ್ಟ್ರಪತಿಗಳೇ ಆಗಲಿ ಅಥವಾ ನ್ಯಾಯಾಧೀಶರೇ ಆಗಲಿ ತಪ್ಪೆಸಗಬಹುದು" ಎಂದಿದೆ.
"ತಮ್ಮ ಮುಂದಿದ್ದ ಮಾಹಿತಿಯನ್ನು ಅನುಸರಿಸಿ ರಾಷ್ಟ್ರಪತಿಗಳು ತೆಗೆದಿಕೊಂಡಿರುವ ನಿರ್ಧಾರ ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ" ಎಂದು ಕೂಡ ನ್ಯಾಯಾಲಯ ಹೇಳಿದೆ. ಒದಗಿಸಿರುವ ಮಾಹಿತಿಯ ಮೇರೆಗೆ ರಾಷ್ಟ್ರಪತಿಗಳ ಮತ್ತು ನ್ಯಾಯಾಲಯದ ಗ್ರಹಿಕೆ ಬೇರೆ ಬೇರೆ ರೀತಿಯದ್ದಾಗಿರುತ್ತದೆ ಎಂದು ಕೇಂದ್ರ ಸರ್ಕಾರ ವಾದ ಮಾಡಿರುವುದಕ್ಕೆ ಕೋರ್ಟ್ ಹೀಗೆ ಹೇಳಿದೆ.
ರಾಜ್ಯದಲ್ಲಿ ಇರುವ ಭ್ರಷ್ಟಾಚಾರವನ್ನು ಪರಿಗಣಿಸಿ ರಾಷ್ಟ್ರಪತಿಗಳು ಈ ನಿರ್ಧಾರ ತೆಗೆದುಕೊಂಡಿದ್ದರೆ "ಯಾವ ರಾಜ್ಯ ಸರ್ಕಾರವೂ ಐದು ನಿಮಿಷಗಳಿಗಿಂತಲೂ ಹೆಚ್ಚು ಉಳಿಯುವುದಿಲ್ಲ" ಎಂದು ಕೂಡ ಕೋರ್ಟ್ ಹೇಳಿದೆ. ಕೇಂದ್ರ ಸರ್ಕಾರಕ್ಕೆ ಉತ್ತರಾಖಂಡ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾಹಿತಿಯಿದೆ, ಆ ಸರ್ಕಾರಕ್ಕೆ ಬಹುಮತ ಸಾಬೀತು ಪಡಿಸಲು ಬಿಟ್ಟು ಕೇಂದ್ರ ಮೌನವಾಗಿರಬೇಕೇ ಎಂದು ರಾಜ್ಯಪಾಲರ ಪರ ವಕೀಲ ಹರೀಶ್ ಸಾಳ್ವೆ ವಾದ ಮಾಡಿದ್ದಕ್ಕೆ ಕೋರ್ಟ್ ಹೀಗೆ ಹೇಳಿದೆ.
"ನೀವು ಚುನಾಯಿತ ಸರ್ಕಾರದ ಅಧಿಕಾರವನ್ನು ಕಿತ್ತುಕೊಂಡರೆ ಅರಾಜಕತೆಗೆ ಎಡೆ ಮಾಡಿಕೊಟ್ಟಂತೆ. ಕಾಂಗ್ರೆಸ್ ನಲ್ಲಿ ಭಿನ್ನಮತವಿದ್ದರೆ ಕೇಂದ್ರ ಸರ್ಕಾರಕ್ಕೇನು ಅದರ ಬಗ್ಗೆ ಕಾಳಜಿ? ನೀವು ರಾಜಕೀಯ ನಿಲುವನ್ನು ಈ ವಿಷದಲ್ಲಿ ತೆಗೆದುಕೊಳ್ಳುವಂತಿಲ್ಲ" ಎಂದು ಕೂಡ ಕೋರ್ಟ್ ಕೇಂದ್ರದ ಎನ್ ಡಿ ಎ ಸರ್ಕಾರಕ್ಕೆ ಛೀಮಾರಿ ಹಾಕಿದೆ.
ರಾಜ್ಯ ಮತ್ತು ಕೇಂದ್ರದಲ್ಲಿ ಎರಡು ವಿಭಿನ್ನ ಪಕ್ಷಗಳು ಅಧಿಕಾರದಲ್ಲಿದ್ದಾಗ, "ರಾಜ್ಯಗಳಲ್ಲಿ ಅವಕಾಶ ಸಿಕ್ಕರೆ ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರ ಹದ್ದಿನ ಕಣ್ಣಿನಿಂದ ಯಾವಾಗಲು ನೋಡುತ್ತಿರುತ್ತದೆ" ಎಂದು ಈ ಪ್ರಕರಣದಿಂದ ಭಾಸವಾಗುತ್ತದೆ ಎಂದು ಕೂಡ ಕೋರ್ಟ್ ಹೇಳಿದೆ.
"ಬಹುಮತ ಸಾಬೀತು ಪಡಿಸುವ ದಿನ ೩೫ ಕಾಂಗ್ರೆಸ್ ಶಾಸಕರು ಸರ್ಕಾರದ ವಿರುದ್ಧ ಮತ ಹಾಕಲಿದ್ದಾರೆ ಎಂದು ಕೇಂದ್ರಕ್ಕೆ ಹೇಗೆ ತಿಳಿಯಿತು?" ಎಂದು ಕೂಡ ಕೋರ್ಟ್ ಪ್ರಶ್ನಿಸಿದೆ.