ಪಿ ಚಿದಂಬರಂ- ಕಾರ್ತಿ ಚಿದಂಬರಂ
ಕಳೆದ ವರ್ಷ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಾಂತ್ಯದಲ್ಲಿ ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ವಾಸನ್ ಐ ಕೇರ್, ಕಾರ್ತಿ ಚಿದಂಬರಂ ಮತ್ತು ಪಿ ಚಿದಂಬರಂ ಅವರ 'ಅಕ್ರಮ' ವ್ಯವಹಾರಗಳ ಬಗ್ಗೆ ವರದಿ ಮಾಡಿತ್ತು. ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿಯನ್ನು ಕಾರ್ತಿ ಚಿದಂಬರಂ ಉಲ್ಲಂಘನೆ ಮಾಡಿದ್ದಾರೆ ಎಂದು ಪತ್ರಿಕೆ ಸುದ್ದಿ ಮಾಡಿದ್ದರೂ ಈ ಬಗ್ಗೆ ಸರ್ಕಾರ ಡಿಸೆಂಬರ್ ಅಂತ್ಯದಲ್ಲಿ ಎಚ್ಚೆತ್ತು, ಕಾರ್ತಿ ಅವರ ಕಂಪನಿಯ ಮೇಲೆ ದಾಳಿ ನಡೆಸಿತ್ತು. ಆದಾಗ್ಯೂ, ನನ್ನ ಮಗನೆಂಬ ಕಾರಣಕ್ಕೆ ಕಾರ್ತಿಯನ್ನು ಟಾರ್ಗೆಟ್ ಮಾಡಬೇಡಿ. ಆತ ವಿದೇಶಗಳಲ್ಲಿ ಕಾನೂನು ಬಾಹಿರವಾಗಿ ಯಾವುದೇ ಆಸ್ತಿ ಹೊಂದಿಲ್ಲ ಎಂದು ಚಿದಂಬರಂ ಹೇಳಿಕೆ ನೀಡಿದ್ದರು.
ಇದೀಗ ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಅಪ್ಪ -ಮಗನ ಪಾಲುದಾರಿಕೆಯ ವಾಸನ್ ಹೆಲ್ತ್ ಕೇರ್ ಮತ್ತು ಅಡ್ವಾಂಟೇಜ್ ಸ್ಟ್ಯಾಟಜಿಕ್ ಕನ್ಸಲ್ಟಿಂಗ್ ಕಂಪನಿಗಳಲ್ಲಿ ನಡೆದಿರುವ ವಿದೇಶಿ ವಿನಿಮಯ ಅಕ್ರಮಕ್ಕೆ ಸಂಬಂಧಿಸಿದಂತೆ ಹೊಸ ಸಾಕ್ಷ್ಯಗಳನ್ನು ಪ್ರಕಟಿಸಿದೆ. ಚಿದಂಬರಂ ಅವರ ಕುಟುಂಬ ಮತ್ತು ಸ್ನೇಹಿತರ ಹೆಸರಿನಲ್ಲಿ ಮಾತ್ರವಲ್ಲ ವಿದೇಶದಲ್ಲಿಯೂ ಆಸ್ತಿಗಳಿದ್ದು, ಬೇನಾಮಿ ಹೆಸರುಗಳಲ್ಲಿ ಆಸ್ತಿ ಹೊಂದಿದ್ದಾರೆ ಎಂಬುದನ್ನು ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಬಯಲು ಮಾಡಿದೆ.
ಬೇನಾಮಿ ಹೆಸರುಗಳಲ್ಲಿ ಅಕ್ರಮ ಆಸ್ತಿ
ಪಕ್ಕಾ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಚಿದಂಬರಂ ಅಕ್ರಮ ಆಸ್ತಿಗಳನ್ನೆಲ್ಲಾ ಬೇನಾಮಿ ಹೆಸರಿನಲ್ಲಿ ಹೊಂದಿದ್ದಾರೆ. ಆಸ್ತಿ ಪಾಸ್ತಿಗಳು ಬೇನಾಮಿ ಹೆಸರಿನಲ್ಲಿದ್ದರೆ, ಆ ಆಸ್ತಿಗಳ ನಿಜವಾದ ಮಾಲೀಕ ಯಾರು ಎಂಬುದನ್ನು ಪತ್ತೆ ಹಚ್ಚುವುದು ಕಷ್ಟ. ಬೇನಾಮಿ ಹೆಸರಿನಲ್ಲಿ ಆಸ್ತಿ ಹೊಂದಿದ್ದರೆ ಅಲ್ಲಿ ದಾಖಲೆಪತ್ರಗಳ ಅವಶ್ಯಕತೆ ಇರುವುದಿಲ್ಲ. ಆದರೆ ಕಾರ್ತಿಗೆ ಬೇನಾಮಿಯ ಮೇಲೆ ನಂಬಿಕೆ ಇರಲಿಲ್ಲ. ಆದ ಕಾರಣ ಆತ ದಾಖಲೆ ಪತ್ರಗಳನ್ನು ಸಿದ್ಧಪಡಿಸಿ ಅದರಲ್ಲಿ ಉಯಿಲನ್ನೂ ಬರೆಸಿಕೊಂಡಿದ್ದಾನೆ.
ಡಿಸೆಂಬರ್ ತಿಂಗಳಲ್ಲಿ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯ ಕಾರ್ತಿಯ ಸಂಸ್ಥೆಗೆ ದಾಳಿ ನಡೆಸಿದಾಗ ಈ ಉಯಿಲು ಪತ್ತೆಯಾಗಿದೆ. ಈ ಉಯಿಲಿನ ಪ್ರತಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಕೈಗೆ ಸಿಕ್ಕಿದೆ. ಚಿದಂಬರಂ ಕುಟುಂಬವು ಅಕ್ರಮವಾಗಿ ಆಸ್ತಿ ಹೊಂದಿದೆ ಎಂಬುದಕ್ಕೆ ಇದೇ ಪ್ರಮುಖ ಸಾಕ್ಷಿಯಾಗಿದೆ.
ಕಾರ್ತಿಯ ಪಾಲುದಾರಿಕೆ ಎಷ್ಟಿದೆ?
2011ರಲ್ಲಿ ಆಸ್‌ಬ್ರಿಡ್ಜ್ ಎಂಬ ಕಂಪನಿಯ ಮಾಲೀಕನಾದ ಕಾರ್ತಿ ಅಡ್ವಂಟೇಜ್‌ನ ಮೂಲಕ ಈ ಕಂಪನಿಯಲ್ಲಿ 3ನೇ 2 ಪಾಲನ್ನು ಹೊಂದಿದ್ದರು. ಅನಂತರ ಅಡ್ವಂಟೇಜ್‌ನ ಮಾಲೀಕತ್ವವನ್ನು ಬೇನಾಮಿ ಹೆಸರಿನಲ್ಲಿ ತೋರಿಸಿ, ಅಲ್ಲಿಂದ ಆ ಆಸ್ತಿಯನ್ನು ತನ್ನ ಮಗಳ ಹೆಸರಿಗೆ ಉಯಿಲು ಬರೆಸಿಕೊಳ್ಳಲಾಗಿತ್ತು.
ಅಡ್ವಾಂಟೇಜ್ ಇಂಡಿಯಾ ವಾಸನ್ ಐಕೇರ್‌ನ 1. 5 ಲಕ್ಷ ಇಕ್ವಿಟಿ ಶೇರ್‌ಗಳಲ್ಲಿ 90,000 ವನ್ನು ಹೊಂದಿದೆ. ಪ್ರತಿ ಶೇರ್‌ಗೆ ರು. 100 ರಂತೆ ಇಟ್ಟಿದ್ದು , ಇದರಲ್ಲಿ ಅಡ್ವಾಂಟೇಜ್ ಇಂಡಿಯಾ ಪ್ರತಿ ಶೇರ್‌ಗೆ ರು.33 ರಂತೆ ಪಾವತಿ ಮಾಡಿದೆ.
1.5 ಲಕ್ಷ ಶೇರ್ ಗಳಲ್ಲಿ 60,000 ವನ್ನು ಮಾರಿಷಸ್ ಮೂಲದ ಹೂಡಿಕೆ ನಿಧಿಯಾದ ಸಿಕೋಯಾ ಕ್ಯಾಪಿಟಲ್ ಇನ್‌ವೆಸ್ಟ್‌ಮೆಂಟ್‌ಗೆ ಎರಡು ಹಂತಗಳಾಗಿ (ಒಂದು ಹಂತದಲ್ಲಿ 30,000 ಶೇರ್‌ಗಳನ್ನು) ಮಾರಲಾಗಿದೆ. ಮೊದಲ ಹಂತದಲ್ಲಿ ಅಡ್ವಾಂಟೇಜ್ ಪ್ರತಿ ಶೇರ್‌ಗೆ ರು. 7,5000 ದಂತೆ 30,000 ಶೇರ್ ಗಳನ್ನು ಮಾರಿತ್ತು ಅಂದರೆ ರು. 22.5 ಕೋಟಿ ವಹಿವಾಟು ಇಲ್ಲಿ ನಡೆದಿತ್ತು. ಮುಂದಿನ ಹಂತದಲ್ಲಿಯೂ ಇಷ್ಟೇ ಬೆಲೆಗೆ ಶೇರ್‌ಗಳನ್ನು ಮಾರಲಾಗಿತ್ತು ಎಂದು ಹೇಳಲಾಗುತ್ತಿದ್ದು, ಉಳಿದ 90,000 ಶೇರ್‌ಗಳನ್ನು ಅದೇ ಮೌಲ್ಯದಲ್ಲಿರಿಸಲಾಗಿತ್ತು. ವಾಸನ್ ಐ ಕೇರ್ ರು. 112. 5 ಕೋಟಿಯ ಒಡೆತನ ಹೊಂದಬೇಕಿತ್ತು ಆದರೆ ಅಡ್ವಾಂಟೇಜ್ ಪಾವತಿ ಮಾಡಿದ ಹಣ ಎಷ್ಟು ಗೊತ್ತಾ ರು. 50 ಲಕ್ಷ!
ಏಪ್ರಿಲ್ 16,2016ರಲ್ಲಿ ಕಾರ್ತಿಯ ಅಕ್ರಮ ಆಸ್ತಿ ಆರೋಪಕ್ಕೆ ಸಂಬಂದಿಸಿದಂತೆ ಸಿಕೋಯಾ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು.
ಅಡ್ವಾಂಟೇಜ್ ಇಂಡಿಯಾ ತಮ್ಮ ಸಹಭಾಗಿತ್ವದ ಕಂಪನಿಯಾದ ಅಡ್ವಾಂಟೇಜ್ ಸ್ಟ್ರ್ಯಾಟೆಜಿಕ್ ಕನ್ಸಲ್ಟಿಂಗ್ ಪಿಟಿಇ ಸಿಂಗಾಪೂರ್ (ಅಡ್ವಾಂಟೇಜ್ ಸಿಂಗಾಪೂರ್), ಮೂಲಕ ಭಾರತದ ಹೊರಗೆ ಹೊಂದಿದ ಆಸ್ತಿಗಳ ಬಗ್ಗೆಯೂ ಸಾಕ್ಷ್ಯ ಲಭಿಸಿದೆ. ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಅಡ್ವಾಂಟೇಜ್ ಕಂಪನಿ ಲಂಡನ್, ದುಬೈ, ದಕ್ಷಿಣ ಆಫ್ರಿಕಾ, ಫಿಲಿಪೈನ್ಸ್, ಥಾಯ್ಲೆಂಡ್, ಸಿಂಗಾಪುರ್, ಮಲೇಷ್ಯಾ, ಶ್ರೀಲಂಕಾ, ಬ್ರಿಟಿಷ್ ವಿರ್ಜಿನ್ ಐಲ್ಯಾಂಡ್, ಫ್ರಾನ್ಸ್, ಅಮೆರಿಕ, ಸ್ವಿಜರ್‌ಲ್ಯಾಂಡ್, ಗ್ರೀಸ್ ಮತ್ತು ಸ್ಪೇನ್‌ನಲ್ಲಿ ಆಸ್ತಿ ಹೊಂದಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿವೆ.
ಅಡ್ವಾಂಟೇಜ್ ಸಿಂಗಾಪೂರ್ ಮೂಲಕ ಜಾಗತಿಕ ಮಟ್ಟದಲ್ಲಿ ಆಸ್ತಿ ಸಂಪಾದನೆ ಮಾಡಲಾಗಿತ್ತು. ಅಷ್ಟೇ ಅಲ್ಲದೆ ಅಡ್ವಾಂಟೇಜ್ ಸಿಂಗಾಪೂರ್ ಮತ್ತು ಶ್ರೀಲಂಕಾದ ಕಂಪನಿ, ಶ್ರೀಲಂಕಾದ ವಿತ್ತ ಸಂಸ್ಥೆಯೊಂದರಲ್ಲಿ ಹೂಡಿಕೆ ಮಾಡಿರುವ ಬಗ್ಗೆ ವಿಚಾರಣೆಯ ಪತ್ರ, ಡಾಲರ್ ಮತ್ತು ಯೂರೋ ವಹಿವಾಟು ನಡೆಸಿರುವುದರ ಬಗ್ಗೆ ದಾಖಲೆಗಳು, ರು. 20 ಕೋಟಿಗಿಂತಲೂ ಹೆತ್ತು ವಿದೇಶಿ ಹಣಗಳ ಮೂಲಕ ಪಾವತಿ ಮಾಡಿದ ದಾಖಲೆಗಳು ಎಲ್ಲವೂ ಈ ದಾಳಿಯಿಂ0ದ ಪತ್ತೆಯಾಗಿವೆ. ಏರ್ಸೆಲ್ ಮ್ಯಾಕ್ಸಿಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಎಲ್ಲ ದಾಖಲೆ ಪತ್ರಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ.
ಬೇನಾಮಿ ಹೆಸರನಲ್ಲಿ ಚಿದಂಬರಂ ಕುಟುಂಬದ ಆಸ್ತಿ
ಅಡ್ವಾಂಟೇಜ್ ಇಂಡಿಯಾದ ಮಾಲೀಕತ್ವವೂ ಬೇನಾಮಿ ಹೆಸರಿನಲ್ಲೇ ಇದೆ. 5 ಲಕ್ಷ ಇಕ್ವಿಟಿ ಶೇರ್‌ಗಳನ್ನು ಹೊಂದಿರುವ ಅಡ್ವಾಂಟೇಜ್ ಇಂಡಿಯಾದಲ್ಲಿ 2 ಲಕ್ಷ ಶೇರ್‌ಗಳನ್ನು ಆಸ್ ಬ್ರಿಡ್ಜ್ ಹೊಂದಿದೆ. 2006 ರಿಂದ 2011 ರವರೆಗೆ ಕಾರ್ತಿ ಅದರ ಮಾಲೀಕರಾಗಿದ್ದರು. ಅದರ ನಂತರ ಕಾರ್ತಿ ಅದನ್ನು ತನ್ನ ನೆರೆಹೊರೆಯವರಾದ ಮೋಹನನ್ ರಾಜೇಶ್ ಅವರ ಹೆಸರಿಗೆ ವರ್ಗಾಯಿಸಿದ್ದರು. ಅದ್ಯಾವುದೇ ವ್ಯವಹಾರವಾಗಿದ್ದರೂ ಮೋಹನನ್ ರಾಜೇಶ್ ಅವರ ಹೆಸರಿಗೆ ವರ್ಗಾವಣೆ ಆದ ನಂತರ ಅದನ್ನು ಕಾರ್ತಿ ಪಡೆದುಕೊಳ್ಳುತ್ತಿದ್ದರು. ಹೀಗೆ ಇವರಿಬ್ಬರ ನಡುವೆ ಪಡೆದು ಕೊಳ್ಳುವ ಪ್ರಕ್ರಿಯೆ ನಡೆ.ುತ್ತಲೇ ಇತ್ತು.
ಆದಾಗ್ಯೂ, ಅಡ್ವಾಂಟೇಜ್ ಇಂಡಿಯಾದ ಇನ್ನುಳಿದ 3 ಲಕ್ಷ ಶೇರ್ ಗಳು ನಾಲ್ವರು ಬೇನಾಮಿಗಳ ಹೆಸರಲ್ಲಿದೆ. ಸಿಬಿಎನ್ ರೆಡ್ಡಿ (2,11,430 ಶೇರ್ ) , ಪದ್ಮ ವಿಶ್ವನಾಥನ್ ಮತ್ತು ರವಿ ವಿಶ್ವನಾಥನ್ (ತಲಾ 32,600 ಶೇರ್) ಮತ್ತು ಭಾಸ್ಕರ ರಾಮನ್ (17,400 ಶೇರ್)ಗಳನ್ನು ಹೊಂದಿದ್ದಾರೆ.
ಚಿದಂಬರಂ ಸುಳ್ಳು ಹೇಳುತ್ತಿರುವುದೇಕೆ?
ಪತ್ರಿಕೆ ಇಷ್ಟೊಂದು ಸಾಕ್ಷ್ಯಾಧಾರಗಳನ್ನು ಒದಗಿಸಿದರೂ, ಚಿದಂಬರಂ ಮತ್ತು ಅವರ ಪುತ್ರ ಸುಳ್ಳು ಹೇಳುತ್ತಿರುವುದೇಕೆ? ಎಂಬುದು ಅರ್ಥವಾಗುತ್ತಿಲ್ಲ. ಪತ್ರಿಕೆಯು ಕಾರ್ತಿಯ ಅವ್ಯವಹಾರವನ್ನು ಬಯಲಿಗೆಳಾದಾಗ ನಾನು ಗೆಳೆಯನೊಂದಿಗೆ ಸೇರಿ ಕಂಪನಿಯೊಂದನ್ನು ಆರಂಭಿಸಿದ್ದು, ಆಮೇಲೆ ಅದನ್ನು ತೊರೆದೆ. ನಾನು ಅಡ್ವಾಂಟೇಜ್ ಕಂಪನಿಯ ನಿರ್ದೇಶಕ ಅಥವಾ ಶೇರ್ ಹೋಲ್ಡರ್ ಅಲ್ಲ. ನನ್ನ ಗೆಳೆಯನ ಕಂಪನಿ ಅಡ್ವಾಂಟೇಜ್, ಅವನನ್ನು ನನಗೆ ಚೆನ್ನಾಗಿ ಗೊತ್ತು ಎಂದು ಹೇಳಿಕೆ ನೀಡಿದ್ದರು
ಇತ್ತ ಚಿದಂಬರಂ ಕೂಡಾ ಈ ಆರೋಪಗಳನ್ನು ಅಲ್ಲಗೆಳೆಯುತ್ತಾ ಬಂದಿದ್ದಾರೆ. ಸರ್ಕಾರಕ್ಕೆ ನನ್ನನ್ನು ಟಾರ್ಗೆಟ್ ಮಾಡಬೇಕು ಎಂದಿದ್ದರೆ ಅವರು ನನ್ನನ್ನು ನೇರಾ ನೇರ ಟಾರ್ಗೆಟ್ ಮಾಡಬಹುದು. ನನ್ನ ಮಗನನ್ನು ಮತ್ತು ಆತನ ವ್ಯವಹಾರಗಳ ಬಗ್ಗೆ ಕೆದಕುವ ಅಗತ್ಯವೇನಿದೆ. ಆತನಿಗೂ ನನ್ನ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics