ಪ್ರಧಾನ ಸುದ್ದಿ

ಮಹದಾಯಿ ಹೋರಾಟ: ರೈತರ ವಿರುದ್ಧದ ಕೇಸ್ ವಾಪಸಾತಿಗೆ ಸಂಪುಟ ಸಭೆ ಒಪ್ಪಿಗೆ

Lingaraj Badiger
ಬೆಂಗಳೂರು: ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರು ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಬಂಧಿತರಾದ ರೈತರ ವಿರುದ್ಧ ದಾಖಲಿಸಿರುವ ಎಲ್ಲಾ ಕೇಸ್ ಗಳನ್ನು ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡದವರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಕೇಸ್ ಗಳನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ. 
ಚಾರ್ಜ್ ಶೀಟ್ ಸಲ್ಲಿಸುವವರೆಗೆ ಕೇಸ್ ಗಳನ್ನು ವಾಪಸ್ ಪಡೆಯಲು ಬರುವುದಿಲ್ಲ. ಹೀಗಾಗಿ ಈಗ ಜೈಲಿನಲ್ಲಿರುವ ರೈತರ ಜಾಮೀನಿಗೆ ಆಕ್ಷೇಪ ಸಲ್ಲಿಸದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ಹೋರಾಟಗಾರರು ಈಗ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಬಹುದು.
ಪ್ರತಿಭಟನೆ ವೇಳೆ ರೈತರ ಮೇಲೆ ದಾಖಲಿಸಿರುವ ಕೇಸ್ ಗಳ ಪರಾಮರ್ಶೆಗೆ ಸಂಬಂಧಿಸಿದಂತೆ ನೇಮಿಸಲಾಗಿದ್ದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರಾಘವೇಂದ್ರ ಔರಾದ್ಕರ್ ನೀಡಿರುವ ವರದಿಯನ್ನಾಧರಿಸಿ ಸಚಿವ ಸಂಪುಟ ಸಭೆ ಈ ತೀರ್ಮಾನ ಕೈಗೊಂಡಿದೆ.
ಸಾರ್ವಜನಿಕರ ಆಸ್ತಿಪಾಸ್ತಿಗೆ ಮತ್ತು ಸರ್ಕಾರದ ಆಸ್ತಿಗೆ ಹಾನಿ ಮಾಡಿದವರ ವಿರುದ್ಧ ದಾಖಲಿಸಿರುವ ಮೊಕದ್ದಮೆಗಳ ವಿಚಾರಣೆ ಮುಂದುವರೆಸಲು ಸಂಪುಟ ಒಪ್ಪಿಗೆ ನೀಡಿದೆ.
ಯಮನೂರಿನಲ್ಲಿ ರೈತರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಕುರಿತಂತೆಯೂ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಿತು.
SCROLL FOR NEXT