ಬೆಂಗಳೂರು: ರಾಜ್ಯವನ್ನು ತಲ್ಲಣಗೊಳಿಸಿದ್ದ ಡಿವೈಎಸ್ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣದ ಸಂಬಂಧ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಕೆಜೆ ಜಾರ್ಜ್ ಗೆ ಸಿಐಡಿ ಕ್ಲೀನ್ ಚಿಟ್ ನೀಡುವ ಸಾಧ್ಯತೆ ಇದೆ.
ಆತ್ಮಹತ್ಯೆಗೂ ಮುನ್ನ ಗಣಪತಿ ಅವರು ಮಾಧ್ಯಮದ ಮುಂದೆ ತನಗೆ ಕಿರುಕುಳ ನೀಡಿದವರ ಬಗ್ಗೆ ಚಾನೆಲ್ ಮುಂದೆ ಹೇಳಿಕೆ ನೀಡಿದ್ದ ಅವರು ತಮ್ಮ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಠಾಣಾ ಡೈರಿಯಲ್ಲಿ ಯಾವುದೇ ಅಧಿಕಾರಿ ಅಥವಾ ರಾಜಕಾರಣಿ ಒತ್ತಡ ಹಾಕಿದ ವಿಚಾರವನ್ನು ಪ್ರಸ್ತಾಪಿಸಿಲ್ಲ ಎಂಬುದು ಸಿಐಡಿ ಪೊಲೀಸರ ತನಿಖೆಯಿಂದ ಪತ್ತೆಯಾಗಿದ್ದು. ಇದು ಆರೋಪ ಎದುರಿಸುತ್ತಿರುವ ಕೆಜೆ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಎ.ಎಂ ಪ್ರಸಾದ್ ಹಾಗೂ ಪ್ರಣವ್ ಮೊಹಂತಿಗೂ ವರದಾನವಾಗಲಿದೆ.
ತಮ್ಮ ಅಧಿಕಾರವಧಿಯಲ್ಲಿ ಮೇಲಿನ ಅಧಿಕಾರಿಗಳಿಂದ ಹಾಗೂ ರಾಜಕಾರಣಿಗಳಿಂದ ಒತ್ತಡ ಬಂದರೆ ಅದನ್ನು ಠಾಣೆಯ ಡೈರಿಯಲ್ಲಿ ದಾಖಲಿಸುವ ಅಧಿಕಾರ ಹೊಂದಿರುತ್ತಾರೆ ಆದರೆ ಗಣಪತಿ ಅವರು 1994ರಿಂದ 2016ರವರೆಗಿನ ಸೇವಾಧಿಯಲ್ಲಿ ಯಾವುದೇ ಅಂಶಗಳನ್ನು ನಮೂದಿಸಿಲ್ಲ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಗಣಪತಿ ಅವರು ಆತ್ಮಹತ್ಯೆಗೂ ಮುನ್ನ ಕೆಜೆ ಜಾರ್ಜ್, ಎಡಿಜಿಪಿ ಎ.ಎಂ ಪ್ರಸಾದ್ ಹಾಗೂ ಐಜಿಪಿ ಪ್ರಣವ್ ಮೊಹಂತಿ ವಿರುದ್ಧ ಚಾನಲ್ ಮುಂದೆ ನೀಡಿರುವ ಹೇಳಿಕೆ ಮಾತ್ರವಷ್ಟೇ ಸಾಕ್ಷ್ಯವಾಗಿದೆ. ಒಂದು ವೇಳೆ ಠಾಣಾ ಡೈರಿಯಲ್ಲಿ ಈ ಬಗ್ಗೆ ದಾಖಲಿಸಿದ್ದರೆ ಕಿರುಕುಳ ಅಥವಾ ಒತ್ತಡ ಆರೋಪ ಇನ್ನಷ್ಟು ಗಟ್ಟಿಗೊಳ್ಳುತ್ತಿತ್ತು. ಚಾಲನ್ ಮುಂದೆ ನೀಡಿದ ಹೇಳಿಕೆಯನ್ನೇ ಆಧಾರ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಮತ್ತಷ್ಟು ದಾಖಲೆಗಳ ಪರಿಶೀಲನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.