ನವದೆಹಲಿ: ಬರಪೀಡಿತ ಜಿಂಬಾಬ್ವೆ ದೇಶ ಮಾಡಿರುವ ಮನವಿಯ ಮೇರೆಗೆ, ಈ ಆಫ್ರಿಕಾ ದೇಶಕ್ಕೆ ಭಾರತ 1 ಮಿಲಿಯನ್ ಡಾಲರ್ ಸಹಾಯಹಸ್ತ ಚಾಚಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ತಿಳಿಸಿದೆ.
"ಜಿಂಬಾಬ್ವೆ ಮಾಡಿದ ಮನವಿಗೆ ಓಗೊಟ್ಟು ಭಾರತ ಸರ್ಕಾರ ನೀಡಿರುವ 1 ಮಿಲಿಯನ್ ಡಾಲರ್ ಅನುದಾನವನ್ನು ಭಾರತೀಯ ರಾಯಭಾರಿ ಕಳೆದ ವಾರ ಜಿಂಬಾಬ್ವೆಗೆ ನೀಡಿದ್ದಾರೆ" ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
"ಈ ಅನುದಾನವನ್ನು ಸ್ವೀಕರಿಸಿರುವ ರಾಷ್ಟ್ರಪತಿ ಮತ್ತು ಸಂಪುಟದ ಪ್ರಧಾನ ಕಾರ್ಯದರ್ಶಿ ಮಿಶೆಕ್ ಸಿಬಂದ, ಎಲ್ ನಿನೋ ತಂದಿರುವ ಬರ ಪರಿಹಾರಕ್ಕಾಗಿ ಜಿಂಬಾಬ್ವೆ ಮಾಡಿದ ಅಂತಾರಾಷ್ಟ್ರೀಯ ಮನವಿಗೆ ಭಾರತ ತಕ್ಷಣ ಪ್ರತಿಕ್ರಿಯಿಸಿರುವುದಕ್ಕೆ ಧನ್ಯವಾದ ಹೇಳಿದ್ದಾರೆ" ಎಂದು ಕೂಡ ಹೇಳಿಕೆ ತಿಳಿಸಿದೆ.
ಹೇಳಿಕೆಯಲ್ಲಿ ತಿಳಿಸಿರುವಂತೆ, ಆರ್ಥಿಕ ವಲಯಗಳಾದ ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ, ಇಂಧನ, ಶಿಕ್ಷಣ ಮತ್ತು ಔಷಧೀಯ ಡ್ರಗ್ ಕ್ಷೇತ್ರಗಳಲ್ಲಿ ಭಾರತ ಮತ್ತು ಜಿಂಬಾಬ್ವೆ ನಡುವೆ ಇರುವ ಉತ್ತಮ ಸಂಬಂಧದ ಬಗ್ಗೆ ಸಿಬಂದ ಸಂತಸ ವ್ಯಕ್ತಪಡಿಸಿದ್ದಾರೆ.
"ಹಾಗೆಯೇ ಎರಡನೇ ಹಂತದ ಸಹಯಾದಲ್ಲಿ 500 ಮೆಟ್ರಿಕ್ ಟನ್ ಅಕ್ಕಿ ಒದಗಿಸಲು ಸಾಗಾಣೆಯ ಬಗ್ಗೆ ಚರ್ಚಿಸಲಾಗುತ್ತಿರುವುದನ್ನು ಭಾರತ ಘೋಷಿಸಿದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಎರಡು ದಶಕಗಳಲ್ಲಿ ಕಂಡಿರದ ಅತಿ ಕೆಟ್ಟ ಬರದ ಪರಿಸ್ಥಿತಿಯಲ್ಲಿ ನಲುಗಿರುವ ಜಿಂಬಾಬ್ವೆಯಲ್ಲಿ ಸಾವಿರಾರು ಜನ ಉಪವಾಸ ಬಿದ್ದಿದ್ದಾರೆ ಎಂದು ವರದಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics