ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸಂಪೂರ್ಣ ಅರಾಜಕತೆಯತ್ತ ಹೊರಳುತ್ತಿದೆ ಮತ್ತು ಈ ಬಿಕಟ್ಟಿಗೆ, ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರಕ್ಕೆ ಪರಿಹಾರ ಕಂಡುಹಿಡಿಯಲು ಸಾಧ್ಯವಿಲ್ಲ ಎಂದು ಬುಧವಾರ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಹೇಳಿದ್ದಾರೆ.
ಚಿದಂಬರಂ ನೀಡಿರುವ ಹೇಳಿಕೆಯಲ್ಲಿ ರಾಜ್ಯದಲ್ಲಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯಲು ಪಿಡಿಪಿ ಪಕ್ಷ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳ ಜೊತೆಗೆ ಕೈಜೋಡಿಸಬೇಕಿದೆ ಎಂದು ಕರೆ ನೀಡಿದ್ದಾರೆ. ಕಣಿವೆಯಲ್ಲಿ ಕರ್ಫ್ಯೂ 40 ನೆಯ ದಿನಕ್ಕೆ ಕಾಲಿಟ್ಟಿದೆ.
ಇಲ್ಲಿಯವರೆಗೂ ಭದ್ರತಾ ಪಡೆಗಳ ನಡುವೆ ನಡೆದ ಘರ್ಷಣೆಗೆ 65 ನಾಗರಿಕರು ಮೃತಪಟ್ಟಿದ್ದು, ರಾಜ್ಯದಲ್ಲಿನ ಈ ಪರಿಸ್ಥಿತಿಗೆ ಬಿಜೆಪಿ-ಪಿಡಿಪಿ ಆಡಳಿತ ಮೈತ್ರಿ ಸರ್ಕಾರವೇ ಕಾರಣ ಎಂದು ಚಿದಂಬರಂ ದೂಷಿಸಿದ್ದಾರೆ.
"ಸದ್ಯದ ಸರ್ಕಾರಕ್ಕೆ ಈ ಬಿಕ್ಕಟಿಗೆ ಪರಿಹಾರ ಕಂಡುಹಿಡಿಯಲು ಸಾಧ್ಯವಿಲ್ಲ ಎಂದೆನಿಸುತ್ತಿದೆ ನನಗೆ. ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಒಪ್ಪಿದರೆ ಪಿಡಿಪಿ ಒಟ್ಟಿಗೆ ಬಂದು ಪರಿಹಾರ ಕಂಡುಹಿಡಿಯಬೇಕಿದೆ: ಮೊದಲಿಗೆ ಹಿಂಸೆಯನ್ನು ನಿಲ್ಲಿಸಲು ತಕ್ಷಣದ ಪರಿಹಾರ ಮತ್ತು ನಂತರ ಜಮ್ಮು ಕಾಶ್ಮೀರದ ಜನರಲ್ಲಿ ಭರವಸೆ, ಶಾಂತಿ ಮತ್ತು ಸಮೃದ್ಧಿಗಾಗಿ ಮುಂದಿನ ಮಾರ್ಗವನ್ನು ಕಂಡುಹಿಡಿಯಬೇಕಿದೆ" ಎಂದು ಚಿದಂಬರಂ ಹೇಳಿದ್ದಾರೆ.
"ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸಂಪೂರ್ಣ ಅರಾಜಕತೆಯತ್ತ ಹೊರಳುತ್ತಿರುವುದಕ್ಕೆ ಕಳವಳಗೊಂಡಿದ್ದೇನೆ. ಕಳೆದ ಆರು ವಾರಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿರುವುದಕ್ಕೆ ಪಿಡಿಪಿ-ಬಿಜೆಪಿ ಸರ್ಕಾರವೇ ಸಂಪೂರ್ಣ ಜವಾಬ್ದಾರಿ" ಎಂದು ಕೂಡ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಪ್ರಧಾನಿ, ಗೃಹ ಸಚಿವ ಮತ್ತು ಭದ್ರತಾ ಸಚಿವರ ಹೇಳಿಕೆಗಳು ಬಿಕಟ್ಟನ್ನು ತೀವ್ರಗೊಳಿಸಿವೆ. ಮಾತುಗಳಲ್ಲಿ ಮತ್ತು ಕ್ರಮಗಳಲ್ಲಿ ನಿಯಂತ್ರಣವಷ್ಟೇ ಪರಿಸ್ಥಿತಿಯನ್ನು ಹತೋಟಿಗೆ ತರಲು ಸಾಧ್ಯ. ಪ್ರತಿಭಟನಾ ನಿರತ ಯುವಕರ, ಇತರ ನಾಗರಿಕರ ಮತ್ತು ಭದ್ರತಾ ಪಡೆಗಳ ಸಾವು ನಮಗೆಲ್ಲ ನೋವು ತಂದೆ. ಇದು ನಿಲ್ಲಬೇಕು" ಎಂದು ಅವರು ಹೇಳಿದ್ದಾರೆ.