ನವದೆಹಲಿ: ಬ್ರಿಟಿಷರ ಆಳ್ವಿಕೆಯಲ್ಲಿ ಕಾಂಗ್ರೆಸ್ ಎದುರಿಸಿದ್ದಕ್ಕಿಂತಲೂ ಸ್ವತಂತ್ರ ಭಾರತದಲ್ಲಿ ಬಿಜೆಪಿ ಪಕ್ಷ ಹೆಚ್ಚು ಪ್ರತಿಕೂಲ ಸನ್ನಿವೇಶಗಳನ್ನು ಎದುರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ತಮ್ಮ ಪಕ್ಷವನ್ನು ಕೆಟ್ಟ ರೀತಿಯಲ್ಲಿ ಚಿತ್ರಿಸಲು ಎಲ್ಲ ರೀತಿಯಲ್ಲಿ ಪ್ರಯತ್ನಿಸಲಾಗಿದೆ ಎಂದಿದ್ದಾರೆ.
ಬೇರೆ ಯಾವುದೇ ಪಕ್ಷಕ್ಕಿಂತಲೂ ಹೆಚ್ಚು ತ್ಯಾಗ ಬಿಜೆಪಿ ಮಾಡಿದೆ ಎಂದು ಮೋದಿ ಪಕ್ಷದ ನೂತನ ಮುಖ್ಯ ಕಚೇರಿಗೆ ಶಿಲಾನ್ಯಾಸ ನೆರವೇರಿಸುವ ಸಂದರ್ಭದಲ್ಲಿ ಹೇಳಿದ್ದಾರೆ. ದೇಶ ಹೆಚ್ಚು ಶಕ್ತಿಯುತವಾದಂತೆ ಒಡೆಯುವ ಶಕ್ತಿಗಳು ಹೆಚ್ಚು ಚಲನಶೀಲವಾಗಿವೆ ಎಂದಿರುವ ಅವರು ಸಮಾಜ ಇನ್ನೂ ಬಲಗೊಂಡು ಹೆಚ್ಚು ಸಾಮರಸ್ಯದಿಂದಿರುವಂತೆ ಮಾಡುವುದು ಅವಶ್ಯಕ ಎಂದಿದ್ದಾರೆ.
ತಮ್ಮ ಘೋಷಣೆ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' (ಎಲ್ಲರ ಜೊತೆಗೆ, ಎಲ್ಲರ ವಿಕಾಸ) ದಂತೆ ಪಕ್ಷದ ಬದ್ಧತೆಯನ್ನು ಎತ್ತಿ ಹಿಡಿಯುವುದಾಗಿ ಹೇಳಿರುವ ಅವರು, "ನಮ್ಮ ಪಕ್ಷ ಹೇಗೆ ಸಿದ್ದಾಂತಗಳಿಗೆ ಬದ್ಧವಾಗಿದೆ ಮತ್ತು ಕೌಟುಂಬಿಕ ರಾಜಕೀಯಕ್ಕೆ ವಿರೋಧವಾಗಿದೆ" ಎಂಬುದನ್ನು ವಿಶ್ವಕ್ಕೆ ಮಾದರಿಯಾಗಿ ಕಟ್ಟಿಕೊಡಲು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
"ಹುಟ್ಟಿದಾಗಿಲಿಂದಲೂ ಪ್ರತಿಕೂಲ ಸನ್ನಿವೇಶಗಳನ್ನು ಕಂಡಿರುವ ಒಂದೇ ಪಕ್ಷ ಬಿಜೆಪಿ. ಪ್ರತಿ ನಡೆಯಲ್ಲಿ ಅದು ಕಷ್ಟಗಳನ್ನು ಎದುರಿಸಿದೆ ಮತ್ತು ಪಕ್ಷವನ್ನು ಕೆಟ್ಟೆ ಬೆಳಕಿನಲ್ಲಿ ತೋರಿಸುವ ಎಲ್ಲ ಚಟುವಟಿಕೆಗಳು ನಡೆದಿವೆ.
"ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಕೂಡ ಕಾಂಗ್ರೆಸ್ ಪಕ್ಷ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ 50-60 ವರ್ಷಗಳವರೆಗೆ ಒದಗಿದಷ್ಟು ಪ್ರತಿಕೂಲ ಪರಿಣಾಮ ಎದುರಿಸಿರಲಿಲ್ಲ" ಎಂದು ಮೋದಿ ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಿರಿಯ ಬಿಜೆಪಿ ನಾಯಕರಾದ ಅಮಿತ್ ಷಾ, ಎಲ್ ಕೆ ಅಡ್ವಾಣಿ, ರಾಜನಾಥ್ ಸಿಂಗ್ ಮತ್ತು ಅರುಣ್ ಜೇಟ್ಲಿ ಮುಂತಾದವರು ಭಾಗವಹಿಸಿದ್ದಾರೆ.
ಇತ್ತೀಚಿನ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಕಚೇರಿಗಾಗಿ ಜಾಗ ಸಿಗುವುದು ಕೂಡ ಕಷ್ಟವಾಯಿತು ಎಂದು ಆರೋಪಿಸಿರುವ ಅವರು ನಮಗೆ ಜಾಗ ಕೊಟ್ಟವರಿಗೆ ತೊಂದರೆ ಮಾಡುವ ಜನರಿದ್ದರು ಎಂದು ಪರೋಕ್ಷವಾಗಿ ತೃಣಮೂಲ ಕಾಂಗ್ರೆಸ್ ಪಕ್ಷದ ಮೇಲೆ ಹರಿಹಾಯ್ದಿದ್ದಾರೆ.
"ಸ್ವಾತಂತ್ರ್ಯದ ನಂತರ ನಮಗಿಂತಲೂ (ಬಿಜೆಪಿ) ಹೆಚ್ಚು ತ್ಯಾಗ ಮಾಡಿದ ಮತ್ತೊಂದು ಪಕ್ಷ ಇಲ್ಲ ಎಂದಿರುವ ಮೋದಿ ಆ ದಿನಗಳಲ್ಲಿ ಚಾಲ್ತಿಯಲ್ಲಿದ್ದ ಸಿದ್ಧಾಂತಕ್ಕೆ ಬದ್ಧಾರಾಗಿದ್ದರೆಂದು ನೂರಾರು ಕಾರ್ಯಕರ್ತರನ್ನು ಕೊಲ್ಲಲಾಗಿದೆ" ಎಂದು ಕೂಡ ಹೇಳಿದ್ದಾರೆ.
ಇದೆ ಸಂದರ್ಭದಲ್ಲಿ ರಿಯೋ ಒಲಂಪಿಕ್ಸ್ ಕುಟಿಯಲ್ಲಿ ಕಂಚಿನ ಪದಕ ಗೆದ್ದ ಸಾಕ್ಷಿ ಮಲಿಕ್ ಅವರಿಗೆ ಮೋದಿ ಅಭಿನಂದಿಸಿದ್ದಾರೆ.