ಪ್ರಧಾನ ಸುದ್ದಿ

ದಲಿತರ ಮೇಲೆ ದಾಳಿ ಖಂಡಿಸಿದ ಅಡ್ವಾಣಿ; ತೀವ್ರ ತನಿಖೆಗೆ ಆಗ್ರಹ

Guruprasad Narayana
ಗಾಂಧಿನಗರ: ನರೇಂದ್ರ ಮೋದಿ ಮುಂದಾಳತ್ವದ ಬಿಜೆಪಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಲು ವಿರೋಧ ಪಕ್ಷಕ್ಕೆ ಹೊಸದಾಗಿ ಸಿಕ್ಕಿರುವ ಶಸ್ತ್ರದಲ್ಲಿ, ಹಿರಿಯ ಬಿಜೆಪಿ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ದೇಶದಾದ್ಯಂತ ದಲಿತರ ಮೇಲೆ ಜರುಗಿರುವ ಇತ್ತೀಚಿನ ದೌರ್ಜನ್ಯಗಳನ್ನು ಖಂಡಿಸಿರುವುದಲ್ಲದೆ, ಈ ಪ್ರಕರಣಗಳ ಬಗ್ಗೆ ತೀವ್ರ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ. 
"ಗುಜರಾತ್ ನಲ್ಲಿ ನಡೆದಿರುವುದು (ದಲಿತರ ಮೇಲಿನ ದೌರ್ಜನ್ಯ) ಖಂಡನೀಯ ಮತ್ತು ಇದರ ಬಗ್ಗೆ ಎಲ್ಲರಿಗು ದುಃಖವಿದೆ. ದೇಶದ ಯಾವ ಭಾಗದಲ್ಲಿಯೂ ದಲಿತರ ಮೇಲೆ ದೌರ್ಜನ್ಯ ಆಗದಂತೆ ನೋಡಿಕೊಳ್ಳಬೇಕು" ಎಂದು ಅಡ್ವಾಣಿ ವರದಿಗಾರರಿಗೆ ಹೇಳಿದ್ದಾರೆ. 
ದಲಿತರ ಮೇಲೆ ಅನಾದಿ ಕಾಲದಿಂದಲೂ ದೌರ್ಜನ್ಯ ನಡೆಯುತ್ತಾ ಬಂದಿದೆ ಎಂದಿರುವ ಅವರು "ಇದೇನು ಹೊಸದಲ್ಲ. ಮಹಾತ್ಮಾ ಗಾಂಧಿ ಅವರನ್ನು ತಿಳಿದವರೆಲ್ಲರೂ, ಅವರ ಸಿದ್ಧಾಂತವನ್ನು ಅನುಸರಿಸುವವರೆಲ್ಲರೂ, ಇತ್ತೀಚಿಗೆ ನಡೆದ ದಲಿತರ ಮೇಲಿನ ದೌರ್ಜನ್ಯಗಳನ್ನು ಸ್ವಾಭಾವಿಕವಾಗಿ ಖಂಡಿಸುತ್ತಾರೆ" ಎಂದು ಕೂಡ ಅವರು ಹೇಳಿದ್ದಾರೆ. 
ನೆನ್ನೆಯಷ್ಟೇ ಕಾಂಗ್ರೆಸ್ ಪಕ್ಷ, ಪ್ರಧಾನಿ ಮೋದಿ ಅವರು ಬಲೂಚಿಸ್ಥಾನದ ಬಗ್ಗೆ ಮಾತನಾಡಿ, ಗುಜರಾತಿನ ದಲಿತರ ಮೇಲೆ ನಡೆದಿರುವ ದೌರ್ಜನ್ಯ ಬಗ್ಗೆ ಮೌನವಾಗಿರುವುದೇಕೆ ಎಂದು ಟೀಕಿಸಿದ್ದಾರೆ ಹಿನ್ನಲೆಯಲ್ಲಿ ಅಡ್ವಾಣಿ ಅವರ ಪ್ರತಿಕ್ರಿಯೆ ಮಹತ್ವ ಪಡೆದುಕೊಂಡಿದೆ. 
ಇತ್ತೀಚಿಗೆ ದಲಿತರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಗುಜರಾತ್ ಕಾಂಗ್ರೆಸ್ ಪಕ್ಷ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ನೆನ್ನೆ ಭೇಟಿ ಮಾಡಿತ್ತು. 
SCROLL FOR NEXT