ಪ್ರಧಾನ ಸುದ್ದಿ

ರಿಯೊ ಒಲಿಂಪಿಕ್ಸ್ ಗೆ ವಿದ್ಯುಕ್ತ ತೆರೆ: 2 ಪದಕಗಳೊಂದಿಗೆ 67ನೇ ಸ್ಥಾನದಲ್ಲಿ ಭಾರತ

Srinivasamurthy VN

ರಿಯೋ ಡಿ ಜನೈರೋ: ಸತತ 18 ದಿನಗಳ ಕಾಲ ನಡೆದ ಕ್ರೀಡಾ ಉತ್ಸವ ರಿಯೋ ಒಲಿಂಪಿಕ್ಸ್ ಗೆ ಭಾನುವಾರ ರಾತ್ರಿ ವಿದ್ಯುಕ್ತ ತೆರೆ ಬಿದ್ದಿದ್ದು, ಸಿಡಿ ಮದ್ದು ಪ್ರದರ್ಶನದ ಮೂಲಕ ಕ್ರೀಡಾ  ಉತ್ಸವಕ್ಕೆ ತೆರೆ ಎಳೆಯಲಾಗಿದೆ.

ರಿಯೋ ಡಿ ಜನೈರೋದ ಕ್ರೀಡಾ ಗ್ರಾಮದಲ್ಲಿ ಲೇಸರ್ ಪ್ರದರ್ಶನ ಹಾಗೂ ಬೆಳಕಿನ ಚಿತ್ತಾರ ಸಿಡಿಸಿದ ಸಿಡಿಮದ್ದು ಪ್ರದರ್ಶನದ ಮೂಲಕ ಕ್ರೀಡಾ ಉತ್ಸವ ಒಲಿಂಪಿಕ್ಸ್ ಗೆ ವಿದ್ಯುಕ್ತ ತೆರೆ  ಎಳೆಯಲಾಯಿತು. ವಿವಿಧ ದೇಶಗಳ ಸಾವಿರಾರು ಕ್ರೀಡಾ ಪಟುಗಳು, ಲಕ್ಷಾಂತರ ಅಭಿಮಾನಿಗಳು ಈ ಅಪೂರ್ವ ಕ್ಷಣಗಳನ್ನು ಕಣ್ತುಂಬಿಕೊಂಡರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ 6 ಪದಕ  ಸಾಧನೆ ಮಾಡಿದ್ದ ಭಾರತ ರಿಯೋ ಗೇಮ್ಸ್‌ನಲ್ಲಿ ಪದಕ ದ್ವಿಗುಣಗೊಳಿಸಿಕೊಳ್ಳುವ ಇರಾದೆಯಲ್ಲಿತ್ತು. ಪದಕದ ಅಪಾರ ನಿರೀಕ್ಷೆ ಹೊಂದಿದ್ದ ಶೂಟಿಂಗ್ ತಂಡ ನೀರಸ ನಿರ್ವಹಣೆ ತೋರಿದರೆ, ಕುಸ್ತಿ  ಹಾಗೂ ಬ್ಯಾಡ್ಮಿಂಟನ್‌ನಲ್ಲಿ ಪದಕ ಜಯಿಸುವ ಮೂಲಕ ಬರಿಗೈಲಿ ಬರುವ ಅವಮಾನದಿಂದ ಭಾರತ ಪಾರಾಯಿತು. ಭಾರತದ ಇತಿಹಾಸದಲ್ಲಿಯೇ ಅತ್ಯಧಿಕ ಕ್ರೀಡಾಪಟುಗಳನ್ನು ಕ್ರೀಡಾಕೂಟಕ್ಕೆ  ರವಾನಿಸಿದ್ದ ಭಾರತ ಕೇವಲ 2 ಪದಕಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.

ಕ್ರೀಡಾಕೂಟದ ಅಂತಿಮ ದಿನವೂ ಕೂಡ ಭಾರತ ಪದಕದಾಸೆ ಹೊಂದಿತ್ತಾದರೂ, 65 ಕೆಜಿ ವಿಭಾಗದ ಕುಸ್ತಿ ಪಂದ್ಯದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಯೋಗೇಶ್ವರ್ ದತ್ ಅರ್ಹತಾ ಸುತ್ತಿನಲ್ಲೇ  ನಿರ್ಗಮಿಸುವ ಮೂಲಕ ಭಾರಿ ನಿರಾಸೆ ಮೂಡಿಸಿದ್ದರು. ಹೀಗಾಗಿ ಕ್ರೀಡಾಕೂಟದಲ್ಲಿ ಭಾರತ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕದೊಂದಿಗೆ ಕೇವಲ 2 ಪದಕಗಳನ್ನು ಪಡೆದು ಪಟ್ಟಿಯಲ್ಲಿ  67ನೇ ಸ್ಥಾನ ಪಡೆದಿದೆ.

ಇನ್ನು ಇಡೀ ಕ್ರೀಡಾಕೂಟದುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಅಮೆರಿಕ 45 ಚಿನ್ನದ ಪದಕ ಸೇರಿದಂತೆ ಒಟ್ಟು 120 ಪದಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದರೆ, ಬ್ರಿಟನ್ 27 ಚಿನ್ನ ಹಾಗೂ ಒಟ್ಟಾರೆ  67 ಪದಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಕ್ರೀಡಾಕೂಟದಲ್ಲಿ ಚೀನಾ ಕೂಡ ಅಲ್ಪ ನಿರಾಸೆ ಹೊಂದಿದ್ದು, ಕಳೆದ ಬಾರಿ 2ನೇ ಸ್ಥಾನದಲ್ಲಿದ್ದ ಚೀನಾ ಈ ಬಾರಿ 26 ಚಿನ್ನದ ಪದಕದೊಂದಿಗೆ 3ನೇ  ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಚೀನಾವನ್ನು ಹಿಂದಿಕ್ಕಿದ ಬ್ರಿಟನ್ ಐತಿಹಾಸಿಕ 2ನೇ ಸ್ಥಾನ ಪಡೆದಿದೆ.

ಒಟ್ಟಾರೆ ಸತತ 18 ದಿನಗಳ ಕ್ರೀಡೋತ್ಸವಕ್ಕೆ ತೆರೆ ಬಿದ್ದಿದ್ದು, ಇದೀಗ ಎಲ್ಲರ ಚಿತ್ತ 2020ರ ಟೊಕಿಯೋ ಒಲಿಂಪಿಕ್ಸ್ ನತ್ತ ನೆಟ್ಟಿದೆ.

SCROLL FOR NEXT