ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ
ಶ್ರೀನಗರ: ಕಾಶ್ಮೀರ ಕಣಿವೆಯ ಗಲಭೆಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಹತ್ಯೆಗಳನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಬುಲೆಟ್ ಮತ್ತು ಪೆಲ್ಲೆಟ್ ಪೆಟ್ಟು ತಿಂದವರು ಹಾಲು ಅಥವಾ ಟಾಫಿ ಕೊಳ್ಳಲು ಹೊರಗೆ ಬಂದವರಲ್ಲ ಎಂದಿದ್ದಾರೆ.
ಕೇಂದ್ರ ಗೃಹಮಂತ್ರಿ ರಾಜನಾಥ್ ಸಿಂಗ್ ಜೊತೆಗೆ ಪತ್ರಿಕಾ ಘೋಷ್ಠಿಯಲ್ಲಿ ಪಾಲ್ಗೊಂಡಿದ್ದ ಅವರಿಗೆ ಪತ್ರಕರ್ತರಿಂದ ತೀವ್ರ ಕಷ್ಟದ ಪ್ರಶ್ನೆಗಳನ್ನು ಎದುರಿಸಬೇಕಾಯಿತು. 2010 ರಲ್ಲಿ ನಾಗರಿಕರನ್ನು ಕೊಂದದ್ದಕ್ಕೆ ಸರ್ಕಾರವನ್ನು ಟೀಕಿಸಿದ್ದ ನೀವು ಈಗ ಪ್ರತಿಭಟನಕಾರರನ್ನು ಹತ್ತಿಕ್ಕಲು ಅಳತೆಮೀರಿ ಭದ್ರತಾ ಪಡೆಗಳನ್ನು ಬಳಸಿಕೊಂಡಿರುವುದನ್ನು ಹೇಗೆ ಸಮರ್ಥಿಸಿಕೊಳ್ಳುವಿರಿ ಎಂಬ ಪ್ರಶ್ನೆಗೆ ಕುಪಿತರಾದ ಮೆಹಬೂಬಾ ಈ ಎರಡು ಪರಿಸ್ಥಿತಿಗಳನ್ನು ಹೋಲಿಸಬೇಡಿ "ನೀವು ತಪ್ಪು. 2010 ರಲ್ಲಿ ನಡೆದಿದ್ದಕ್ಕೆ ಕಾರಣವಿತ್ತು. ಆಗ ಮಚಲಿಯಲ್ಲಿ ನಕಲಿ ಎನಕೌಂಟರ್ ಆಗಿತ್ತು. ಇಂದು ಎನಕೌಂಟರ್ ನಲ್ಲಿ ಮೂವರು ಭಯೋತ್ಪಾದಕರನ್ನು ಕೊಲ್ಲಲಾಗಿದೆ ಮತ್ತು ಇದಕ್ಕೆ ಸರ್ಕಾರವನ್ನು ದೂಷಿಸಲು ಹೇಗೆ ಸಾಧ್ಯ" ಎಂದಿದ್ದಾರೆ.
ಜುಲೈ 8 ರಂದು ಹಿಜಬುಲ್ ಮುಜಾಹಿದ್ದೀನ್ ಕಮ್ಯಾಂಡರ್ ಬುರ್ಹಾನ್ ವಾನಿಯನ್ನು ಹತ್ಯೆ ಮಾಡಿದ ಮೇಲೆ ಸರ್ಕಾರ ಕರ್ಫ್ಯು ವಿಧಿಸಿದ್ದರು ಜನ ಬೀದಿಗಿಳಿದಿದ್ದರು ಎಂದು ಅವರು ಹೇಳಿದ್ದಾರೆ. "ಆ ಬಾಲಕ ಸೇನಾ ಶಿಬಿರದಿಂದ ಟಾಫಿ ಕೊಳ್ಳಲು ಹೋಗಿದ್ದನೆ? ಪೊಲೀಸ್ ಠಾಣೆಯ ಮೇಲೆ (ದಕ್ಷಿಣ ಕಾಶ್ಮೀರ) ದಾಳಿ ಮಾಡಿದ ಆ ಹುಡುಗ ಹಾಲು ಕೊಳ್ಳಲು ಹೋಗಿದ್ದನೆ? ಎರಡನ್ನು ಹೋಲಿಸಬೇಡಿ" ಎಂದು ಅವರು ಹೇಳಿದ್ದಾರೆ.
ಭಯೋತ್ಪಾದಕರು ತಮ್ಮನ್ನು ರಕ್ಷಿಸಲು ಬಡ ಕಾಶ್ಮೀರ ಯುವಕರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದಿರುವ ಮೆಹಬೂಬಾ "ಮೃತಪಟ್ಟವರಲ್ಲಿ 95% ಬಡ ಕುಟುಂಬಗಳಿಗೆ ಸೇರಿದವರು" ಎಂದಿದ್ದಾರೆ.
ಹಿಂಸೆಗೆ ಇಳಿದವರು 5% ಕಾಶ್ಮೀರಿ ಜನರು ಮಾತ್ರ ಎಂದಿರುವ ಪಿಡಿಪಿ ಪಕ್ಷದ ಮುಖಂಡೆ "95% ಜನಕ್ಕೆ ಹಿಂಸೆ ಬೇಕಾಗಿಲ್ಲ. ಅವರಿಗೆ ಶಾಂತಿ ಬೇಕಾಗಿದೆ. ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳಲು ಅವರಿಗೆ ಮಾತುಕತೆ ಬೇಕಾಗಿದೆ. ಅವರನ್ನು ನಾವು ತಲುಪಬೇಕು" ಎಂದು ಕೂಡ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics