ನವದೆಹಲಿ: ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಪತಾಕೆ ಹಾರಿಸಿದ್ದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುವನ್ನು ದೇಶದ ಅತಿದೊಡ್ಡ ಪ್ಯಾರಾಮಿಲಿಟರಿ ದಳವಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಗೌರವ ಕಮಾಂಡೆಂಟ್ ಆಗಿ ನೇಮಿಸಲು ನಿರ್ಧರಿಸಿದೆ.
ಇದೇ ಅಲ್ಲದೆ ಸಿಆರ್ಪಿಎಫ್ ನ ರಾಯಭಾರಿಯಾಗಿಯೂ ಸಿಂಧುವನ್ನು ಆಯ್ಕೆ ಮಾಡಲು ತೀರ್ಮಾನಿಸಿದ್ದು ಈಗಾಗಲೇ ಕೇಂದ್ರ ಗೃಹ ಸಚಿವಾಲಯಕ್ಕೆ ತನ್ನ ಶಿಫಾರಸನ್ನು ಸಲ್ಲಿದೆ ಎಂದು ಸಿಆರ್ಪಿಎಫ್ ಅಧಿಕೃತ ಮೂಲಗಳು ತಿಳಿಸಿವೆ.
ಸಿಆರ್ಪಿಎಫ್ ನ ಶಿಫಾರಸಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಕ್ಕರೆ ಪಿವಿ ಸಿಂಧುಗೆ ಕಮಾಂಡೆಂಟ್ ರ್ಯಾಂಕ್ ನ ಬ್ಯಾಡ್ಜ್ ಹಾಗೂ ಸಿಆರ್ಪಿಎಫ್ ನ ಸಮವಸ್ತ್ರವನ್ನು ಪ್ರದಾನ ಮಾಡಲಾಗುತ್ತದೆ.
ಈ ಶಿಫಾರಸ್ಸಿಗೂ ಮುನ್ನ ಸಿಂಧು ಅವರ ಅಭಿಪ್ರಾಯ ಪಡೆಯಲಾಗಿತ್ತು ಎಂದು ಸಿಆರ್ಪಿಎಫ್ ಹೇಳಿದೆ. ಸಿಆರ್ಪಿಎಫ್ ನ ಕಮಾಂಡೆಂಟ್ ರ್ಯಾಂಕ್, ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಮಟ್ಟದ ಸ್ಧಾನವಾಗಿದ್ದು ಫೀಲ್ಡ್ ಆಪರೇಷನ್ ವೇಳೆ 1 ಸಾವಿರ ಸದಸ್ಯರ ಬೆಟಾಲಿಯನ್ ಅನ್ನು ಮುನ್ನಡೆಸುವ ಕಮಾಂಡ್ ಅಧಿಕಾರಿಯಾಗಲಿದ್ದಾರೆ.