ಮೊರದಾಬಾದ್: ಕೇಂದ್ರ ಸರ್ಕಾರ ಕಪ್ಪು ಹಣದ ವಿರುದ್ಧ ಕ್ರಮ ಅಲ್ಲ, ಸಮರವೇ ಸಾರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಭ್ರಷ್ಟರ ವಿರುದ್ಧ ಗುಡುಗಿದ್ದಾರೆ.
ಇಂದು ಉತ್ತರ ಪ್ರದೇಶದ ಮೊರದಾಬಾದ್ ಜಿಲ್ಲೆಯಲ್ಲಿ ಬಿಜೆಪಿಯ ಪರಿವರ್ತನ್ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಪ್ಪು ಹಣದ ವಿರುದ್ಧ ಕ್ರಮ ಕೈಗೊಂಡರೆ ಅದು ಅಪರಾಧನಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಕಪ್ಪು ಹಣದ ವಿರುದ್ಧದ ನಮ್ಮ ಹೋರಾಟವೇ ತಪ್ಪು ಎಂದು ಹಲವರು ಹೇಳಿದ್ದಾರೆ ಎಂದು ಪರೋಕ್ಷವಾಗಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶದ ನಾಗರಿಕರೇ ನನಗೆ ಹೈಕಮಾಂಡ್ ಎಂದ ಪ್ರಧಾನಿ ಮೋದಿ, ನನಗೆ ಕೇವಲ 50ದಿನ ಸಮಯ ಕೊಡಿ. ದೇಶದಲ್ಲಿ ಬದಲಾವಣೆ ಎಂದರೆ ಏನು ಅಂತ ತೋರಿಸುತ್ತೇನೆ ಎಂದರು.
ದೇಶದಲ್ಲಿ ಇಂದು ಬ್ಯಾಂಕ್ ನ ಮುಂದೆ ಜನಸಾಮಾನ್ಯರು ಕ್ಯೂ ನಿಂತಿರಬಹುದು. ಆದರೆ ಮುಂದೆ ಅವರು ಕ್ಯೂ ನಿಲ್ಲಬೇಕಾಗಿಲ್ಲ. ಡಿಜಿಟಲ್ ಇಂಡಿಯಾಗೆ ಭಾರತ ಸಿದ್ಧವಾಗಿದೆ. ನೀವೂ ಅಪ್ ಗ್ರೇಡ್ ಆಗಿ. ನಿಮ್ಮ ಮೊಬೈಲ್ ಅನ್ನೇ ಬ್ಯಾಂಕ್ ಆಗಿ ಪರಿವರ್ತಿಸಿ. ನಗದು ವ್ಯವಹಾರ ಕಡಿಮೆ ಮಾಡಿ ಎಂದು ಪ್ರಧಾನಿ ಕರೆ ನೀಡಿದರು.
ಇದೇ ವೇಳೆ ಭ್ರಷ್ಟಾಚಾರದ ವಿರುದ್ಧ ಗುಡುಗಿದ ಪ್ರಧಾನಿ ಮೋದಿ ಅವರು, ನಾವು ಭ್ರಷ್ಟರ ಎಲ್ಲಾ ದಾರಿಗಳನ್ನು ಬಂದ್ ಮಾಡಿಯೇ ತೀರುತ್ತೇವೆ. ನೋಟ್ ನಿಷೇಧದ ನಂತರ ಭ್ರಷ್ಟರು ಜನ್ ಧನ್ ಖಾತೆಯನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿದ್ದು, ಒಂದು ವೇಳೆ ದುರ್ಬಳಕೆ ಮಾಡಿಕೊಂಡರೆ ಅವರಿಗೆ ಶಿಕ್ಷೆ ಖಚಿತ ಎಂದರು. ಅಲ್ಲದೆ ಜನ್ ಧನ್ ಖಾತೆ ದುರ್ಬಳಕೆ ಮಾಡಿಕೊಳ್ಳಲು ಭ್ರಷ್ಟರಿಗೆ ಅವಕಾಶ ನೀಡಬಾರದು ಎಂದು ಕರೆ ನೀಡಿದರು.