ಚೆನ್ನೈ: ತೀವ್ರ ಅನಾರೋಗ್ಯದಿಂದ ಸೋಮವಾರ ರಾತ್ರಿ ವಿಧಿವಶರಾದ ತಮಿಳುನಾಡು ಮುಖ್ಯಮಂತ್ರಿ ಹಾಗೂ ತಮಿಳರ ಪಾಲಿನ ಪ್ರೀತಿಯ ಅಮ್ಮ ಜಯರಾಮನ್ ಜಯಲಲಿತಾ ಅವರ ಅಂತ್ಯ ಸಂಸ್ಕಾರ ಮಂಗಳವಾರ ಸಂಜೆ ಚೆನ್ನೈನ ಮರೀನಾ ಬೀಚ್ ನಲ್ಲಿರುವ ಎಂಜಿಆರ್ ಸ್ಮಾರಕದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಉಸ್ತುವಾರಿ ರಾಜ್ಯಪಾಲ ಸಿ.ವಿದ್ಯಾಸಾಗರ್, ಮಾಜಿ ರಾಜ್ಯಪಾಲರಾದ ಕೆ.ರೋಸಯ್ಯ, ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ತಮಿಳುನಾಡು ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಅವರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯಾತಿಗಣ್ಯರು ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಜಯಲಲಿತಾ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಜಯಲಲಿತಾ ಅವರ ಆಪ್ತೆ ಶಶಿಕಲಾ ನಟರಾಜನ್ ಅವರು ಬ್ರಾಹ್ಮಣ ಅಯ್ಯಂಗಾರ್ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಿದ ನಂತರ ಶ್ರೀಗಂಧದ ವಿಶೇಷ ಪೆಟ್ಟಿಗೆಯಲ್ಲಿ ಜಯಲಲಿತಾ ಅವರ ಪಾರ್ಥಿವ ಶರೀರವನ್ನು ಸೇನಾ ಸಿಬ್ಬಂದಿ ಸಮಾಧಿಯೊಳಗೆ ಇಳಿಸಿದರು.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ಅವರ ಸಮಾಧಿ ಸಮೀಪವೇ ಜಯಲಲಿತಾ ಅವರ ಸಮಾಧಿ ಸಹ ನಿರ್ಮಿಸಲಾಗಿದೆ.
ಇದಕ್ಕೂ ಮುನ್ನ ಜಯಲಲಿತಾ ಅವರ ಪಾರ್ಥಿವ ಶರೀರವನ್ನು ರಾಜಾಜಿ ಹಾಲ್ ನಿಂದ ಮಿಲಿಟರಿಯ ತೆರೆದ ವಿಶೇಷ ವಾಹನದ ಮೂಲಕ ಮರೀನಾ ಬೀಚ್ ಗೆ ಮೆರವಣಿಗೆ ಮೂಲಕ ತರಲಾಯಿತು. ಈ ವೇಳೆ ಲಕ್ಷಾಂತರ ಅಭಿಮಾನಿಗಳು ಅಮ್ಮ, ಅಮ್ಮ ಎಂದು ಘೋಷಣೆ ಕೂಗುತ್ತಾ ಭಾವಪೂರ್ಣ ವಿಧಾನ ಹೇಳಿದರು.
ರಸ್ತೆಯ ಇಕ್ಕೆಲಗಳಲ್ಲಿಯೂ ಜನಸಾಗರ ತುಂಬಿದ್ದರೆ, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರ ಕಣ್ಣೀರು ಮುಗಿಲುಮುಟ್ಟಿತ್ತು. ರಸ್ತೆ, ಕಟ್ಟಡ, ಮರಗಳ ಮೇಲೆಲ್ಲ ಕುಳಿತು ಜನರು ತಮ್ಮ ನಾಯಕಿಯ ಅಂತಿಮ ದರ್ಶನ ಪಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಮೆರವಣಿಗೆಯಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಜನ ಸೇರಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos