ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವರ್ಧಾ ಚಂಡಮಾರುತ ಸೋಮವಾರ ಮಧ್ಯಾಹ್ನ ತಮಿಳುನಾಡು ಮತ್ತು ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಲಿದ್ದು. ನಾಳೆ ಚೆನ್ನೈ ಹಾಗೂ ನೆಲ್ಲೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
'ವರ್ಧಾ' ಚಂಡಮಾರುತ ಸುಮಾರು 100 ಕಿ.ಮೀ ವೇಗದಲ್ಲಿ ಬೀಸುತ್ತಿದ್ದು, ಚೆನ್ನೈ, ಕಾಂಚಿಪುರಂ ಹಾಗೂ ತಿರುವಳ್ಳೂರಿನಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೆ ಈ ಮೂರು ಜಿಲ್ಲೆಗಳಲ್ಲಿ ಇಂದು ಸಂಜೆಯಿಂದಲೆ ಮಳೆ ಆರಂಭವಾಗುವ ಸಾಧ್ಯತೆ ಇದ್ದು, ರಾತ್ರಿಯಿಂದ ಮತ್ತಷ್ಟು ಜೋರಾಗುವ ಸಾಧ್ಯತೆ ಇದು ಹವಾಮಾನ ಇಲಾಖೆ ಹೇಳಿದೆ.
ಚಂಡಮಾರುತದ ಹಿನ್ನೆಲೆಯಲ್ಲಿ ಚೆನ್ನೈ, ಕಾಂಚಿಪುರ, ತಿರುವಳ್ಳೂರು ಹಾಗೂ ಪುದುಚೇರಿಯಲ್ಲಿ ನಾಳೆ ಶಾಲಾ ಕಾಲೇಜ್ ಗಳಿಗೆ ರಜೆ ಘೋಷಿಸಲಾಗಿದೆ.
ಕರಾವಳಿಗೆ ಸಮೀಪಿಸುತ್ತಿದ್ದಂತೆಯೇ 130 ಕಿ.ಮೀ. ವೇಗದಲ್ಲಿ ಗಾಳಿಯೂ ಬೀಸುವ ಎಚ್ಚರಿಕೆಯನ್ನು ನೀಡಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕರಾವಳಿಯಲ್ಲಿ ಎನ್ ಡಿಆರ್ ಸಿಬ್ಬಂದಿ ನಿಯೋಜಿಸಲಾಗಿದೆ.