ಚೆನ್ನೈ: ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿರುವ ವರ್ಧಾ ಚಂಡಮಾರುತ ಪರಿಣಾಮ ರಾಜಧಾನಿ ಚೆನ್ನೈ ನಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಭೀತಿ ಆರಂಭವಾಗಿದೆ.
ಮುಂಜಾನೆಯಿಂದಲೇ ಚೆನ್ನೈನಾದ್ಯಂತ ಭಾರಿಮಳೆಯಾಗುತ್ತಿದ್ದು, ರಸ್ತೆಗಳೆಲ್ಲಾ ಜಲಾವೃತ್ತವಾಗಿವೆ. ಪರಿಣಾಮ ಚೆನ್ನೈನಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸಂಚಾರ ತೀವ್ರ ಅಸ್ತವ್ಯಸ್ಥವಾಗಿದೆ. ಚೆನ್ನೈನಲ್ಲಿನ ಪ್ರತೀಕೂಲ ಹವಾಮಾನದಿಂದಾಗಿ ವಿಮಾನ ಸಂಚಾರದಲ್ಲೂ ಭಾರಿ ವ್ಯತ್ಯಯವಾಗಿದ್ದು, ಈಗಾಗಲೇ ಸುಮಾರು 15 ವಿಮಾನಗಳು ಸಂಚಾರ ರದ್ದುಗೊಳಿಸಿವೆ. ಅಂತೆಯೇ ಚೆನ್ನೈಗೆ ಆಗಮಿಸಬೇಕಿದ್ದ 25 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ಚೆನ್ನೈಗೆ ಆಗಮಿಸಬೇಕಿದ್ದ 9 ವಿಮಾನಗಳ ಸಮಯದಲ್ಲಿ ಭಾರಿ ವಿಳಂಬವಾಗಿದೆ.
ವರ್ಧಾ ಚಂಡಮಾರುತ ಪರಿಣಾಮ ನಗರದಲ್ಲಿ ಭಾರಿ ಮಳೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಮನೆ ಬಿಟ್ಟು ಹೊರಗೆ ಬರದಂತೆ ಚೆನ್ನೈನ ಕಡಲ ತೀರದ ನಿವಾಸಿಗಳಿಗೆ ಸೂಚನೆ ನೀಡಲಾಗಿದೆ. ಅಂತೆಯೇ ಚೆನ್ನೈನ ಎಲ್ಲ ಶಾಲಾಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಖಾಸಗಿ ಕಂಪನಿಗಳಿಗ ನೌಕರರಿಗೆ ರಜೆ ನೀಡುವಂತೆ ಅಥವಾ ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡುವಂತೆ ಕಂಪನಿಗಳಿಗೆ ತಮಿಳುನಾಡ ಸರ್ಕಾರ ಮನವಿ ಮಾಡಿದೆ.
ಚೆನ್ನೈನಲ್ಲಿ ಬೀಸುತ್ತಿರುವ ಬಿರುಗಾಳಿ ಹಾಗೂ ಮಳೆ ಪರಿಣಾಮ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದ್ದು, ಹಲವೆಡೆ ಮರಗಳು ಧರೆಗುರುಳಿರುವ ಘಟನೆ ನಡೆದಿದೆ. ಪ್ರಸ್ತುತ ಚೆನ್ನೈ ಕರಾವಳಿ ತೀರದಿಂದ ಚಂಡಮಾರುತ ಸುಮಾರು 105 ಕಿ.ಮೀ ದೂರದಲ್ಲಿದ್ದು, ಪ್ರತೀ ಗಂಟೆಗೆ 100-101 ಕಿ.ಮೀ ವೇಗದಲ್ಲಿ ಧಾವಿಸುತ್ತಿದೆ ಎಂದು ಹವಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹವಾಮಾನ ವೈಪರೀತ್ಯವನ್ನು ಎದುರಿಸಲು ಚೆನ್ನೈನಲ್ಲಿ ಹಾಗೂ ದಕ್ಷಿಣ ಆಂಧ್ರ ಪ್ರದೇಶದಲ್ಲಿ ಬೀಡು ಬಿಟ್ಟಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಹಾಗೂ ಅಗ್ನಿಶಾಮಕ ದಳಗಳು ಸರ್ವ ಸನ್ನದ್ಧವಾಗಿದ್ದು, ಈಗಾಗಲೇ ಸುಮಾರು 25ಕ್ಕೂ ಅಧಿಕ ನುರಿತ ಈಜು ತಜ್ಞರನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.
ಚೆನ್ನೈಗೆ ಪ್ರವಾಹ ಭೀತಿ
ಇನ್ನು ಚಂಡಮಾರುತ ಪರಿಣಾಮ ಇಂದು ಮುಂಜಾನೆಯಿಂದಲೇ ಚೆನ್ನೈನಲ್ಲಿ ಭಾರಿ ಮಳೆಯಾಗುತ್ತಿದ್ದು, ಚೆನ್ನೈನ ರಸ್ತೆಗಳು ನೀರಿನಲ್ಲಿ ಜಲಾವೃತ್ತವಾಗಿವೆ. ಪ್ರಸ್ತುತ ಬೀಳುತ್ತಿರುವ ಭಾರಿ 2015ರ ಪ್ರವಾಹ ಪರಿಸ್ಥಿತಿಯನ್ನು ನೆನಪಿಸುತ್ತಿದ್ದು, ಮತ್ತೆ ಚೆನ್ನೈನಲ್ಲಿ ಪ್ರವಾಹ ಎದುರಾಗುವ ಭೀತಿ ಸೃಷ್ಟಿಸಿದೆ.