ಲಖನೌ: ಉತ್ತರಪ್ರದೇಶದ ಯಮುನಾ ಎಕ್ಸ್ಪ್ರೆಸ್ ವೇನಲ್ಲಿ ಸಂಭವಿಸಿದ ಕಾರ್ ಅಪಘಾತದಲ್ಲಿ ಇಬ್ಬರು ಮಹಿಳೆಯರನ್ನು ಒಳಗೊಂಡಂತೆ ನಾಲ್ಕು ಜನ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಜೀರೋ ಪಾಯಿಂಟ್ ನಿಂದ ಏಳು ಕಿಮೀ ದೂರದಲ್ಲಿರುವ ಗ್ರೇಟರ್ ನೊಯಿಡಾದಲ್ಲಿ ಈ ಅಪಘಾತ ಸಂಭವಿಸಿದೆ.
ಮಂಜು ದಟ್ಟವಾಗಿ ಕವಿದಿದ್ದರಿಂದ, ರಸ್ತೆ ಕಾಣದಾಗಿ ಆಲ್ಟೊ ಕಾರ್, ನಿಂತಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಗುದ್ದಿದೆ. ಮೃತಪಟ್ಟವರನ್ನು ಗಾಜಿಯಾಬಾದ್ ನಿವಾಸಿಗಳಾದ ಮನೋಜ್ ಕುಮಾರ್ (೫೩), ಸೋನಿ ಸಿನ್ಹಾ (೫೦), ಬಿಹಾರದ ಪಾಟ್ನಾ ನಿವಾಸಿಯಾದ ಉಷಾ (೭೩) ಮತ್ತು ನವದೆಹಲಿಯ ಜಾಮಿಯಾ ನಗರದ ನಿವಾಸಿ ಸುಲ್ತಾನ್ ಅಹಮದ್ (೪೦) ಎಂದು ಗುರುತಿಸಲಾಗಿದೆ.
ಮೃತಪಟ್ಟ ಮನೋಜ್ ಕುಮಾರ್ ಸಿಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ ಸಂಸ್ಥೆಯ ಹಿರಿಯ ಅಧಿಕಾರಿಯಾಗಿದ್ದು, ಮದುವೆ ಸಮಾರಂಭ ಮುಗಿಸಿ ಬಿಹಾರದಿಂದ ಪತ್ನಿ ಮತ್ತು ಅತ್ತೆಯೊಂದಿಗೆ ಹಿಂದಿರುಗುತ್ತಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.