ಪ್ರಧಾನ ಸುದ್ದಿ

'ಡಿಜಿಟಲ್ ಇಂಡಿಯಾ' ಅಭಿಯಾನದ ಸುರಕ್ಷತೆಯನ್ನು ಪ್ರಶ್ನಿಸಿದ ಮಮತಾ

Guruprasad Narayana
ಕೋಲ್ಕತ್ತಾ: ಕೆಲವು ಹಿರಿಯ ಪತ್ರಕರ್ತರ ಈಮೇಲ್ ಮತ್ತು ಟ್ವಿಟ್ಟರ್ ಖಾತೆಗಳನ್ನು ಹ್ಯಾಕ್ ಮಾಡಿ ಅವರ ವೈಯಕ್ತಿಕ ವಿವರಗಳನ್ನು ಕದ್ದಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 'ಡಿಜಿಟಲ್ ಇಂಡಿಯಾ' ಅಭಿಯಾನದ ಸುರಕ್ಷತೆಯನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. 
ಇದು ಪ್ರತಿಭಟನೆಗಳನ್ನು ಬೆದರಿಸುವ ಮತ್ತು ಹತ್ತಿಕ್ಕಲು ನಡೆಸುತ್ತಿರುವ ಹುನ್ನಾರ ಎಂದು ಕೂಡ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಬ್ಯಾನರ್ಜಿ ಆರೋಪಿಸಿದ್ದಾರೆ. 
"ಪತ್ರಕರ್ತರ ಖಾತೆಗಳು ಮತ್ತು ಬ್ಯಾಂಕ್ ವಿವರಗಳನ್ನು ಹ್ಯಾಕ್ ಮಾಡಿರುವ ವರದಿಗಳನ್ನು ನೋಡುತ್ತಿದ್ದೇನೆ. ಇದು ಸಾರ್ವಜನಿಕ ಹಿತಾಸಕ್ತಿಗಾಗಿ ಮಾಡಿರುವುದಲ್ಲ... ಇದು ಖಾಸಗಿತನದ ಉಲ್ಲಂಘನೆ. ಇದು ಪ್ರತಿಭಟನೆಗಳನ್ನು ಬೆದರಿಸುವ ಮತ್ತು ಹತ್ತಿಕ್ಕಲು ನಡೆಸುತ್ತಿರುವ ಪ್ರಯತ್ನ. ಸರ್ಕಾರ ಡಿಜಿಟಲ್ ಜೀವನವನ್ನು ಅಳವಡಿಸಿಕೊಳ್ಳಲು ಹೇಳುತ್ತಿದೆ ಮತ್ತು ಇದು ಸುರಕ್ಷ ಎಂದು ಕೂಡ ಹೇಳುತ್ತಿದೆ" ಎಂದು ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ. 
ಲೆಜನ್ ಎಂದು ಕರೆದುಕೊಂಡ ಒಂದು ಗುಂಪಿನಿಂದ ಇತ್ತೀಚಿಗೆ ಹಿರಿಯ ಪತ್ರಕರ್ತರಾದ ಬರ್ಖಾ ದತ್ ಮತ್ತು ರವೀಶ್ ಕುಮಾರ್ ಅವರ ಟ್ವಿಟ್ಟರ್ ಖಾತೆಗಳನ್ನು ಹ್ಯಾಕ್ ಮಾಡಲಾಗಿತ್ತು. ಇದೆ ಗುಂಪು ಇದಕ್ಕೂ ಮುಂಚಿತವಾಗಿ ವಿಜಯ್ ಮಲ್ಯ ಮತ್ತು ರಾಹುಲ್ ಗಾಂಧಿ ಖಾತೆಗಳನ್ನು ಕೂಡ ಹ್ಯಾಕ್ ಮಾಡಿತ್ತು. 
"ಇದು ಅಷ್ಟು ಸುರಕ್ಷವಾಗಿದ್ದರೆ, ಪತ್ರಕರ್ತರ ಬ್ಯಾಂಕ್ ವಿವರಗಳನ್ನು ಲಕ್ಷಾಂತರ ಹ್ಯಾಕರ್ ಗಳಿಗೆ ಬಹಿರಂಗಪಡಿಸಲು ಹೇಗೆ ಸಾಧ್ಯ? ಡಿಜಿಟಲ್ ಇಂಡಿಯಾ ಅಭಿಯಾನದ ಕುಂದು ಕೊರತೆಗಳು ಬಯಲಾಗಿವೆ" ಎಂದು ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ. 
SCROLL FOR NEXT