ಅಕ್ರಮ ನೋಟ್ ಬದಲಾವಣೆ: ಬೆಂಗಳೂರಿನಲ್ಲಿ ಮತ್ತೆ ಇಬ್ಬರು ಆರ್ ಬಿಐ ಅಧಿಕಾರಿಗಳ ಬಂಧನ
ಅಕ್ರಮವಾಗಿ ಹಳೆ ನೋಟ್ ಬದಲಾವಣೆ ಮಾಡಿದ ಆರೋಪದ ಮೇಲೆ ಬೆಂಗಳೂರಿನಲ್ಲಿ ಮತ್ತೆ ಇಬ್ಬರು ಆರ್ ಬಿಐ ಅಧಿಕಾರಿಗಳನ್ನು ಸಿಬಿಐ...
ಬೆಂಗಳೂರು: ಅಕ್ರಮವಾಗಿ ಹಳೆ ನೋಟ್ ಬದಲಾವಣೆ ಮಾಡಿದ ಆರೋಪದ ಮೇಲೆ ಬೆಂಗಳೂರಿನಲ್ಲಿ ಮತ್ತೆ ಇಬ್ಬರು ಆರ್ ಬಿಐ ಅಧಿಕಾರಿಗಳನ್ನು ಸಿಬಿಐ ಶನಿವಾರ ಬಂಧಿಸಿದೆ.
ಸುಮಾರು ಎರಡು ಕೋಟಿ ರುಪಾಯಿ ಹಳೆ ನೋಟ್ ಅನ್ನು ಅಕ್ರಮವಾಗಿ ಹೊಸ ನೋಟ್ ಗೆ ವಿನಿಮಯ ಮಾಡಿಕೊಡಲು ಯತ್ನಿಸಿದ ಆರೋಪದ ಮೇಲೆ ಆರ್ ಬಿಐನ ನಗದು ವಿಭಾಗದ ಹಿರಿಯ ವಿಶೇಷ ಸಹಾಯಕ ಸದಾನಂದ್ ನಾಯಕ್ ಹಾಗೂ ವಿಶೇಷ ಸಹಾಯಕ ಎ.ಕೆ.ಕೆವಿನ್ ಅವರನ್ನು ಸಿಬಿಐ ಅಧಿಕಾರಿಗಳು ಇಂದು ಬಂಧಿಸಿದ್ದಾರೆ. ಇದರೊಂದಿಗೆ ಸಿಬಿಐ ಬೆಂಗಳೂರಿನ ಆರ್ ಬಿಐ ಕಚೇರಿಯ ಮೂವರು ಅಧಿಕಾರಿಗಳನ್ನು ಬಂಧಿಸಿದಂತಾಗಿದೆ.
ಈ ಹಿಂದೆ ಡಿಸೆಂಬರ್ 13ರಂದು ಕಪ್ಪುಹಣವನ್ನು ಬಿಳಿಯಾಗಿಸುವ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಆರ್ ಬಿಐನ ವಿಶೇಷ ಸಹಾಯಕ ಕೆ.ಮೈಕಲ್ ಅವರನ್ನು ಬಂಧಿಸಿತ್ತು.
ಸುಮಾರು 1.51 ಕೋಟಿ ರು. ಕಪ್ಪುಹಣವನ್ನು ಬಿಳಿಯಾಗಿಸಲು ಸಹಕರಿಸಿದ ಆರೋಪದ ಮೇಲೆ ಮೈಕಲ್ ಅವರನ್ನು ಬಂಧಿಸಲಾಗಿದ್ದು, ಬಂಧಿತರಿಂದ ಸಿಬಿಐ ಒಟ್ಟು 17 ಲಕ್ಷ ರು.ಹಣವನ್ನು ಜಪ್ತಿ ಮಾಡಲಾಗಿತ್ತು.