ತಮಿಳುನಾಡು ಮುಖ್ಯ ಕಾರ್ಯದರ್ಶಿ ಪಿ.ರಾಮ ಮೋಹನ್ ರಾವ್ ಮನೆ
ಚೆನ್ನೈ: ತಮಿಳುನಾಡಿನ ರಾಜಕೀಯ ನಾಯಕರಿಗೆ ಶಾಕ್ ನೀಡಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಬೆಳಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಮನೆ, ಕಚೇರಿ ಹಾಗೂ ಸಂಬಂಧಿಗಳ ಮನೆ ಮೇಲೂ ದಾಳಿ ನಡೆಸಿದ್ದಾರೆ.
ಇಂದು ಬೆಳಗ್ಗೆ ಚೆನ್ನೈನ ಅಣ್ಣಾ ನಗರದಲ್ಲಿರುವ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರಾಮ ಮೋಹನ್ ರಾವ್ ಅವರ ನಿವಾಸ, ಕಚೇರಿ ಸೇರಿದಂತೆ ಸುಮಾರು 10 ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿಯ ವೇಳೆ 2 ಸಾವಿರ ರುಪಾಯಿ ಮುಖಬೆಲೆಯ 18 ಲಕ್ಷ ರುಪಾಯಿ ಹಾಗೂ ಎರಡು ಕೆಜಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಕಳೆದ ವಾರ ಪ್ರಭಾವಿ ಮರಳು ಗಣಿಗಾರಿಕೆ ಉದ್ಯಮಿ ಶೇಖರ್ ರೆಡ್ಡಿ ಅವರ ಮನೆ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು, 170 ಕೋಟಿ ರು ನಗದು ಹಾಗೂ 130 ಕೆಜಿ ಚಿನ್ನ ಮತ್ತು ಆಭರಣವನ್ನು ಜಪ್ತಿ ಮಾಡಿದ್ದರು. ಇದರ ಬೆನ್ನಲ್ಲೇ ಶೇಖರ್ ರೆಡ್ಡಿ ರಾಮ್ ಮೋಹನ್ ರಾವ್ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಇಂದು ಸರ್ಕಾರ ಮುಖ್ಯ ಕಾರ್ಯದರ್ಶಿ ಅವರ ಮನೆ, ಕಚೇರಿ ಮೇಲೆ ದಾಳಿ ಮಾಡಿದೆ.
ರಾಮ ಮೋಹನ ರಾವ್ ಅವರು 2016ರ ಜೂನ್‌ನಲ್ಲಿ ತಮಿಳು ನಾಡು ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಇದರ ಜತೆಗೆ ಅವರು ಜಾಗೃತ ಆಯುಕ್ತರಾಗಿಯೂ ಆಡಳಿತ ಸುಧಾರಣೆಗಳ ಆಯುಕ್ತರಾಗಿಯೂ ಹೆಚ್ಚುವರಿ ಕಾರ್ಯಭಾರ ಹೊಂದಿದ್ದಾರೆ.
ಈ ಹಿಂದೆ ರಾವ್ ಅವರು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ರಾವ್ ಅವರು 2017ರ ಸೆಪ್ಟಂಬರ್‌ನಲ್ಲಿ ನಿವೃತ್ತರಾಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics