ನವದೆಹಲಿ: ನೋಟು-ನಿಷೇಧದ ಬಳಿಕ ದೇಶದಲ್ಲಿ ಉಂಟಾಗಿರುವ ನಗದು ಅಭಾವ ಬಹುಶಃ ಡಿಸೆಂಬರ್ 30ರ ಬಳಿಕ ಅಂದರೆ ಹೊಸ ವರ್ಷದ ವೇಳೆಗೆ ಕಡಿಮೆಯಾಗಬಹುದು ಎಂಬ ಆಶಾಭಾವಕ್ಕೆ ಹೊಡೆತ ಬೀಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ನೋಟು ನಿಷೇಧದ ಬಳಿಕ ದೇಶದಲ್ಲಿ ಎದುರಾಗಿರುವ ನಗದು ಬಿಕ್ಕಟ್ಟು ಶಮನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು 50 ದಿನಗಳ ಕಾಲಾವಕಾಶ ಕೇಳಿದ್ದರು. ಈ ಕಾಲಾವಕಾಶದ ಅವಧಿ ಮುಗಿಯುತ್ತಾ ಬಂದಿದ್ದರೂ ನಗದು ಬಿಕ್ಕಟ್ಟು ಮಾತ್ರ ಶಮನವಾಗುವ ಯಾವುದೇ ಲಕ್ಷಣಗಳೂ ಗೋಚರಿಸುತ್ತಿಲ್ಲ. ಆರ್ಬಿಐನಿಂದ ಹೊಸ ನೋಟುಗಳ ಮುದ್ರಣ ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವ ಕಾರಣ, ಪ್ರಧಾನಿ ನರೇಂದ್ರ ಮೋದಿ ಕೋರಿದ್ದ 50 ದಿನಗಳ ಗಡುವು ಮುಗಿದ ನಂತರವೂ ಸಹ ಬ್ಯಾಂಕುಗಳಿಂದ ಹಣ ವಿತ್ಡ್ರಾ ಮಾಡುವ ಮಿತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಬ್ಯಾಂಕಿಂಗ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಪ್ರಸ್ತುತ ಇರುವ ವಾರಕ್ಕೆ 24 ಸಾವಿರ ರು. ಗಳ ವಿತ್ ಡ್ರಾಮಿತಿಯನ್ನು ಮತ್ತಷ್ಟು ದಿನಗಳ ಕಾಲ ಮುಂದುವರೆಸಲು ಬ್ಯಾಂಕುಗಳು ನಿರ್ಧರಿಸಿದ್ದು, ಹೊಸ ವರ್ಷಾರಂಭದಲ್ಲಿ ವಿತ್ ಡ್ರಾ ಮಿತಿಯನ್ನು ಸಂಪೂರ್ಣವಾಗಿ ಹಿಂಪಡೆಯುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಮುದ್ರಣವಾಗಿರುವ ಹೊಸ ನೋಟುಗಳ ಪೈಕಿ ಕೆಲ ಪ್ರಮಾಣದ ನೋಟುಗಳು ಕೆಲ ಭ್ರಷ್ಟ ಅಧಿಕಾರಿಗಳಿಂದಾಗಿ ಈಗಾಗಲೇ ಕಾಳಧನಿಕರ ತಿಜೋರಿ ಸೇರಿದ್ದು, ಇನ್ನು ಐಟಿ ಅಧಿಕಾರಿಗಳು ದಾಳಿ ಮಾಡಿ ವಶಪಡಿಸಿಕೊಂಡಿರುವ ಅಪಾರ ಪ್ರಮಾಣದ ನಗದು ಚಲಾವಣೆಗೆ ಬರುಲು ಕಾನೂನಿನ ಅಡೆ-ತಡೆಗಳಿವೆ. ನ್ಯಾಯಾಲಯ ಮಧ್ಚ ಪ್ರವೇಶಿಸಿ ಈ ನೋಟುಗಳನ್ನು ಚಲಾವಣೆಗೆ ತರಬಹುದಾದರೂ ಇದಕ್ಕೂ ಕಾನೂನಾತ್ಮಕ ತೊಡಕಿದೆ.
ಹೊಸದಾಗಿ ಮುದ್ರಣವಾಗುತ್ತಿರುವ ನೋಟುಗಳು ಚಲಾವಣೆಗೆ ಬಾರದ ಹೊರತು ನಗದು ಬಿಕ್ಕಟ್ಟನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಹಣದ ಹರಿವು ಹೆಚ್ಚಾದ ಬಳಿಕ ವಿತ್ಡ್ರಾ ಮಿತಿಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹಿರಿಯ ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನರು ಮತ್ತು ವ್ಯಾಪಾರಸ್ಥರ ಹಣದ ಬೇಡಿಕೆಯನ್ನು ಪೂರೈಸಲು ಬಹುತೇಕ ಬ್ಯಾಂಕುಗಳು ಹೆಣಗಾಡುತ್ತಿವೆ. ಆರ್ಬಿಐನಿಂದ ನಿರೀಕ್ಷಿತ ಪ್ರಮಾಣದಲ್ಲಿ ಬ್ಯಾಂಕುಗಳಿಗೆ ಹೊಸ ನೋಟುಗಳು ಪೂರೈಕೆಯಾಗುತ್ತಿಲ್ಲ. ಹೀಗಾಗಿ ವಿತ್ ಡ್ರಾ ಮಿತಿ ಇನ್ನಷ್ಟು ದಿನ ಮುಂದುವರೆಯಲಿದೆ ಎಂದು ಎಸ್ಬಿಐ ಬ್ಯಾಂಕಿನ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಅಭಿಪ್ರಾಯಪಟ್ಟಿದ್ದಾರೆ.