ಬೆಂಗಳೂರು: ಬಡತನ, ಅಪೌಷ್ಠಿಕತೆ, ಜಾತೀಯತೆ ಹಾಗೂ ದಲಿತರ ಮೇಲಿನ ದೌರ್ಜನ್ಯದಿಂದಾಗಿ ದೇಶ ನರಳುತ್ತಿದೆ ಎಂದು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಮಂಗಳವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಭಾರತೀಯ ವಕೀಲರ ಸಂಘ ಹಮ್ಮಿಕೊಂಡಿದ ಸಂವಿಧಾನ, ಸುಪ್ರೀಂ ಕೋರ್ಟ್ ಮತ್ತು ಸಾಮಾಜಿಕ ನ್ಯಾಯ ಕುರಿತ 9ನೇ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅನ್ಸಾರಿ, ದೇಶದಲ್ಲಿ ಪ್ರತಿ 18 ನಿಮಿಷಕ್ಕೊಮ್ಮೆ ದಲಿತರ ಮೇಲೆ ದೌರ್ಜನ್ಯ ಹಾಗೂ ದಬ್ಬಾಳಿಕೆ ನಡೆಯುತ್ತಿದೆ ಎಂದರು.
ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗಬೇಕು. ಹಾಗ ಮಾತ್ರ ಸಮಾನತೆ ಮತ್ತು ದೇಶದ ಅಭಿವೃದ್ಧಿ ಹೊಂದಲು ಸಾಧ್ಯ. ಆದರೆ ಶೇ.45ರಷ್ಟು ಸಂಪತ್ತು ಕೇವಲ ಶೇ.1ರಷ್ಟು ಇರುವ ಕಾರ್ಪೋರೇಟ್ ಜಗತ್ತಿನ ಕೈಯಲ್ಲಿದೆ. ಹೀಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.
ಸಮಾಜದ ಪ್ರತಿಯೊಬ್ಬರ ಅಭಿವೃದ್ಧಿ ಮತ್ತು ಶೋಷಿತರ ಬೆಳವಣಿಗೆಗೆ ಸಮಾನತೆ ಪ್ರಬಲ ಅಸ್ತ್ರ. ಹೀಗಾಗಿ ಅದು ಸಮರ್ಪಕವಾಗಿ ಜಾರಿಯಾಗಬೇಕು. ಆದರೆ ಇತ್ತೀಚಿಗೆ ಅದರ ಪಾಲನೆಯಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಇದೇ ವೇಳೆ ನ್ಯಾಯಾಂಗವೂ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಪ್ರಬಲವಾದ ಶಕ್ತಿಯಾಗಿದ್ದು, ಸುಪ್ರೀಂ ಕೋರ್ಟ್ ಕಾಲಕಾಲಕ್ಕೆ ನ್ಯಾಯದ ಪರಿಕಲ್ಪನೆಗೆ ಪೂರಕವಾಗಿ ಸ್ಪಂದಿಸಿದೆ ಎಂದರು.