ಬೆಂಗಳೂರು: ನೋಟ್ ನಿಷೇಧದ ನೆಪ ಹೇಳಿ ಜನ ತೆರಿಗೆ ಕಟ್ಟುವುದರಿಂದ ನುಣುಚಿಕೊಳ್ಳಲು ಅವಕಾಶ ನೀಡಬೇಡಿ. ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಗರಿಷ್ಠ ಮೌಲ್ಯದ ನೋಟ್ ನಿಷೇಧದ ನಂತರ ತೆರಿಗೆ ಸಂಗ್ರಹ ಕುಂಠಿತವಾದ ಹಿನ್ನಲೆಯಲ್ಲಿ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಣಕಾಸು, ವಾಣಿಜ್ಯ, ಅಬಕಾರಿ, ಸಾರಿಗೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಿಎಂ, ನೋಟು ನಿಷೇಧದ ನೆಪ ಹೇಳಿ ತೆರಿಗೆಯಿಂದ ವಂಚಿತವಾಗಲು ಅವಕಾಶ ನೀಡಬೇಡಿ . ಈಗಾಗಲೇ ಎರಡು ತಿಂಗಳು ಕಳೆದುಹೋಗಿದ್ದು, ಮುಂದಿನ ವರ್ಷದಿಂದ ಹೆಚ್ಚಿನ ತೆರಿಗೆ ಬೊಕ್ಕಸಕ್ಕೆ ತರಬೇಕು ಎಂದು ಸೂಚಿಸಿದರು.
ಕಳೆದ ಎರಡು ತಿಂಗಳಿನಿಂದ ತೆರಿಗೆ ಸಂಗ್ರಹ ಗಣನೀಯವಾಗಿ ಕುಸಿತ ಕಂಡಿದ್ದು, 2016-17ನೇ ಸಾಲಿನಲ್ಲಿ 83 ಸಾವಿರ ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದ್ದು, ತೆರಿಗೆಯ ಎಲ್ಲಾ ಮೂಲಗಳಿಂದ ಪ್ರತಿ ತಿಂಗಳಿಗೆ ಸರಾಸರಿ 6500 ಕೋಟಿ ರು. ತೆರಿಗೆ ಸಂಗ್ರಹ ಆಗಬೇಕಾಗಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಅಂಕಿ ಅಂಶಗಳ ಸಮೇತ ವಿವರಿಸಿದರು.
ಕಳೆದ ಎರಡು ತಿಂಗಳುಗಳಲ್ಲಿ ತೆರಿಗೆ ಸಂಗ್ರಹದಲ್ಲಿ ಗಣನೀಯ ಕುಸಿತವಾಗಿದೆ. ಹಣಕಾಸು, ವಾಣಿಜ್ಯ, ಅಬಕಾರಿ, ಸಾರಿಗೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗಳ ತೆರಿಗೆ ಸಂಗ್ರಹದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.