ಬೆಂಗಳೂರು: ಆಫ್ರಿಕಾದ ತಾಂಜಾನಿಯಾದ ಯುವತಿಗೆ ಥಳಿಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಿ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ ಸುಷ್ಮಾ ಸ್ವರಾಜ್, ಘಟನೆ ಕುರಿತು ಪೂರ್ಣ ವರದಿ ನೀಡುವಂತೆ ಕೇಳಿದ್ದು, ರಾಜ್ಯದಲ್ಲಿ ವಿದೇಶಿಗರಿಗೆ ಪೂರ್ಣ ಭದ್ರತೆ ಒದಗಿಸುವಂತೆ ಸೂಚಿಸಿದ್ದಾರೆ.
ವಿದೇಶಿ ಯುವತಿ ಮೇಲೆ ಮನಬಂದಂತೆ ಥಳಿಸಿರುವುದು ನಮಗೆ ತುಂಬಾ ನೋವುಂಟು ಮಾಡಿದೆ. ಇಂತಹ ಘಟನೆಗಳು ನಾವು ತಲೆತಗ್ಗಿಸುವಂತೆ ಮಾಡುತ್ತಿದೆ. ನಮ್ಮ ದೇಶದಲ್ಲಿ ವಿದೇಶಿ ಮಹಿಳೆಯೊಂದಿಗೆ ಈ ರೀತಿ ವರ್ತಿಸಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ, ಪ್ರಕರಣ ಸಂಬಂಧ ಕಠಿಣ ಕ್ರಮ ಕೈಗೊಳ್ಳಿ ಎಂದು ತಾಂಜಾನಿಯಾ ಹೈಕಮಿಷನ್ ಭಾರತ ಸರ್ಕಾರಕ್ಕೆ ಒತ್ತಡ ಹೇರಿದೆ.
ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ಮಾನವೀಯತೆ ಮರೆತ ಕೆಲ ಸಾರ್ಜವನಿಕರು ವಿದೇಶಿ ಮಹಿಳೆಯ ಬಟ್ಟೆ ಬಿಚ್ಚಿ, ಮನಸೋ ಇಚ್ಛೆ ಥಳಿಸಿದ್ದಾರೆ. ಈ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಬಳಿ ನಡೆದಿತ್ತು. ಈ ಸಂಬಂಧ ಪೊಲೀಸರು ದೂರು ಸ್ವೀಕರಿಸದೆ ನಿರ್ಲಕ್ಷ ಮಾಡಿದ್ದಾರೆಂದು ವಿದ್ಯಾರ್ಥಿನಿಯು ಪೊಲೀಸ್ ಉನ್ನತಾಧಿಕಾರಿಗಳಿಗೆ ಮತ್ತು ತಾಂಜೇನಿಯಾ ರಾಯಭಾರ ಕಚೇರಿ ಮೂಲಕ ಕೇಂದ್ರ ಸರ್ಕಾರಕ್ಕೂ ದೂರು ನೀಡಿದ್ದಳು.