ಅಹಮದಾಬಾದ್: ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವುದು ಅಸಭ್ಯವೇ ಆಗಿದ್ದರೂ ಇದರಿಂದ ಮಹಿಳೆಯರ ಸಂಕೋಚ ಸ್ವಭಾವಕ್ಕೆ ಧಕ್ಕೆ ಉಂಟಾಗುವುದಿಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಟೀ ಮಾರಾಟ ಮಾಡುವ ಉಷಾಬೆನ್ ಎಂಬ ಮಹಿಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. " ಶಾಮ್ ಸುಂದರ್ ಗೋರೆ ಎಂಬ ವ್ಯಕ್ತಿಯೊಬ್ಬ ತನಗೆ ಅಪಮಾನ ಮಾಡಲು (ಮುಜುಗರ) ಉಂಟಾಗುವಂತೆ ಮಾಡಲು ತನ್ನ ಟೀ ಅಂಗಡಿಯ ಬಳಿ ಮೂತ್ರ ವಿಸರ್ಜನೆಗೆ ಮುಂದಾಗಿದ್ದ ಎಂದು ಆರೋಪಿಸಿ ಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು.
ದೂರಿನ ವಿಚಾರಣೆ ನಡೆಸಿದ ನ್ಯಾ.ಜೆಬಿ ಪಾರ್ಡಿವಾಲ, ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವುದು ಅಸಭ್ಯವೇ ಆಗಿದ್ದರೂ ಮಹಿಳೆಯರ ಸಂಕೋಚ ಸ್ವಭಾವಕ್ಕೆ ಧಕ್ಕೆ ಉಂಟಾಗುವುದಿಲ್ಲ ಎಂದು ಹೇಳುವ ಮೂಲಕ ಆರೋಪಿ ಮೇಲೆ ಸೆಕ್ಷನ್ 354 ರ ಅಡಿಯಲ್ಲಿ ದಾಖಲಾಗಿದ್ದ ಆರೋಪವನ್ನು ರದ್ದುಗೊಳಿಸಿದ್ದಾರೆ. ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಲ್ಲಿದ್ದ ತಾಯಿಯನ್ನು ನೋಡಲು ತೆರಳುತ್ತಿದ್ದ ವೇಳೆ ಶಾಮ್ ಸುಂದರ್ ಗೋರೆ ಮಾರ್ಗ ಮಧ್ಯದಲ್ಲಿ ವಾಹನ ನಿಲ್ಲಿಸಿ ಉಷಾಬೆನ್ ಅವರ ಟೀ ಅಂಗಡಿಯ ಬಳಿ ಮೂತ್ರ ವಿಸರ್ಜನೆ ಮಾಡಿದ್ದ. ಈ ಬಗ್ಗೆ ಉಷಾಬೆನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ತನಗೆ ಮುಜುಗರ ಉಂಟಾಗಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದರು.