ಬೆಂಗಳೂರು: ಸುಡಾನ್ ನ ವಿದ್ಯಾರ್ಥಿ ಮೇಲಿನ ಹಲ್ಲೆ ಇದೀಗ ದೇಶಾದ್ಯಂತ ರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಈಡಾಗುತ್ತಿರುವ ಬೆನ್ನಲ್ಲೇ ಕರ್ನಾಟಕ ರಾಜ್ಯದಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಆಫ್ರಿಕಾ ಪ್ರಜೆಗಳು ಅಕ್ರಮವಾಗಿ ನೆಲೆಸಿರುವ ಕುರಿತು ಮಾಹಿತಿ ತಿಳಿದುಬಂದಿದೆ.
ಸುದ್ದಿ ಪತ್ರಿಕೆಯೊಂದು ವರದಿ ಮಾಡಿರುವಂತೆ ಆಫ್ರಿಕಾದ ಉಗಾಂಡ, ತಾಂಜೇನಿಯಾ, ನೈಜೀರಿಯಾ, ಕೀನ್ಯಾ, ಘಾನಾ, ಸುಡಾನ್, ಲಿಬಿಯಾ, ಇಥಿಯೋಫಿಯಾ, ಕಾಂಗೋ, ಅಲ್ಜೀರಿಯಾ, ನಮೀಬಿಯಾ, ಜಾಂಬಿಯಾ ಸೇರಿದಂತೆ 15ಕ್ಕೂ ಹೆಚ್ಚು ದೇಶಗಳ ಸುಮಾರು 32 ಸಾವಿರ ಪ್ರಜೆಗಳ ವೀಸಾ ಅವಧಿ ಮುಗಿದು 2 ರಿಂದ 3 ವರ್ಷ ಕಳೆದಿದ್ದರೂ ಅವರೆಲ್ಲರೂ ರಾಜ್ಯದ ವಿವಿಧ ನಗರಗಳಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಅಚ್ಚರಿಯ ವಿಚಾರವೆಂದರೆ ಹೀಗೆ ಅಕ್ರಮವಾಗಿ ನೆಲೆಸಿರುವವರ ಪೈಕಿ 15 ಸಾವಿರಕ್ಕೂ ಹೆಚ್ಚು ಮಂದಿಯ ವಿರುದ್ಧ ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ. ಮಾದಕ ವಸ್ತು ಕಳ್ಳ ಸಾಗಣೆ, ವೇಶ್ಯಾವಾಟಿಕೆ, ಆನ್‌ಲೈನ್ ವಂಚನೆ, ದರೋಡೆ, ಸುಲಿಗೆ, ನಕಲಿ ಪದವಿಗಳ ಮಾರಾಟ ದಂಧೆಯಲ್ಲಿ ಆಫ್ರಿಕನ್ ಪ್ರಜೆಗಳು ವ್ಯಾಪಕವಾಗಿ ತೊಡಗಿಸಿಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇನ್ನು ತಲೆಮರೆಸಿಕೊಂಡಿರುವ ಕ್ರಿಮಿನಲ್‌ಗಳ ವಿರುದ್ಧ ಹೆಚ್ಚಾಗಿ ಮಾದಕ ವಸ್ತು ಕಳ್ಳ ಸಾಗಣೆ, ವೇಶ್ಯಾವಾಟಿಕೆ ಹಾಗೂ ಆನ್‌ಲೈನ್ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ಬೆಂಗಳೂರು, ಮಂಗಳೂರು ಹಾಗೂ ಬೆಳಗಾವಿಯಲ್ಲೂ ಮಾದಕ ವಸ್ತು ಮಾರಾಟ ಭರ್ಜರಿಯಾಗಿಯೇ ನಡೆಯುತ್ತಿದೆ. ವಿದೇಶಕ್ಕೆ ಕಳ್ಳಸಾಗಣೆ ಮಾಡುವುದನ್ನು ಹೊರತುಪಡಿಸಿ ಒಟ್ಟಾರೆಯಾಗಿ ರಾಜ್ಯದಲ್ಲಿ ವಾರ್ಷಿಕ ಅಂದಾಜು 500 ಕೋಟಿ ರು. ಮೌಲ್ಯದ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಪಬ್, ಬಾರ್, ರೆಸಾರ್ಟ್ ಗಳ ಜತೆಗೆ ಶಾಲಾ-ಕಾಲೇಜುಗಳು ಡ್ರಗ್ಸ್ ಮಾಫಿಯಾದ ಟಾರ್ಗೆಟ್ ಆಗಿರುವುದರಿಂದ ಇಲ್ಲಿನ ವಹಿವಾಟು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಯಾರಿಗೂ ಶಿಕ್ಷೆಯಾಗಿಲ್ಲ
ಇದುವರೆಗೆ ರಾಜ್ಯದಲ್ಲಿ 85 ಮಂದಿ ಕ್ರಿಮಿನಲ್‌ಗಳನ್ನು ಮಾತ್ರ ಬಂಧಿಸಲಾಗಿದೆ. 2010ರಲ್ಲಿ 4 ಮಂದಿಗೆ ಶಿಕ್ಷೆಯಾಗಿದ್ದು ಹೊರತುಪಡಿಸಿದರೆ, ಇದುವರೆಗೆ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ. ಡ್ರಗ್ಸ್ ಮಾರಾಟ ಪ್ರಕರಣವನ್ನು ಮಾತ್ರ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಉಳಿದಂತೆ ಆನ್‌ಲೈನ್ ವಂಚನೆ ಜಾಲದಲ್ಲಿ ಕೆಲವರನ್ನು ಬಂಧಿಸಲಾಗಿದೆ. ಉಳಿದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದಿರುವುದೇ ಆಫ್ರಿಕನ್ನರ ಪುಂಡಾಟಿಕೆ ಹೆಚ್ಚಲು ಕಾರಣ ಎಂದು ಪತ್ರಿಕಾ ವರದಿಯಲ್ಲಿ ತಿಳಿಸಲಾಗಿದೆ.
ಒಟ್ಟಾರೆ ಸುಡಾನ್ ವಿದ್ಯಾರ್ಥಿ ಮೇಲಿನ ಹಲ್ಲೆ ಪ್ರಕರಣ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಒಳಗಾಗುತ್ತಿದ್ದಂತೆಯೇ ಆಫ್ರಿಕನ್ ಪ್ರಜೆಗಳ ಒಂದೊಂದೇ ಅಕ್ರಮಗಳು ಬೆಳಕಿಗೆ ಬರುತ್ತಿವೆ.