ಪ್ರಧಾನ ಸುದ್ದಿ

'ವಾಯುಪುತ್ರ' ಹನುಮಂತಪ್ಪ ಬದುಕಿ ಬರುತ್ತಾನೆ: ಹುಬ್ಬಳ್ಳಿ ಯೋಧನ ಕುಟುಂಬ

Lingaraj Badiger
ಧಾರವಾಡ: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರು ನಿವಾಸಿ, ಕನ್ನಡಿಗ ಯೋಧ ಹನುಮಂತಪ್ಪ ಕೊಪ್ಪದ್ ಅವರು ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ನಲ್ಲಿ ಸಂಭವಿಸಿದ ಭೀಕರ ಹಿಮಪಾತದಲ್ಲಿ ಸಿಲುಕಿ 6 ದಿನಗಳ ನಂತರ ಬದುಕುಳಿದಿರುವುದು ಪವಾಡವೇ ಸರಿ ಎಂದು ಆತನ ಕುಟುಂಬ ಹಾಗೂ ಗ್ರಾಮಸ್ಥರು ಹೇಳುತ್ತಿದ್ದಾರೆ.
ನನ್ನ ಮಗ ಈಗ ಪುನರ್ ಜನ್ಮ ಪಡೆದಂತಾಗಿದೆ. ಮಗನ ಮುಖ ಆದಷ್ಟು ಬೇಗ ನೋಡ್ಬೇಕು. ನಾನು ಅವನ ಮುಖ ನೋಡಬೇಕ್ರೀ...ಅದಕ್ಕೆ ಸರ್ಕಾರಕ್ಕೆ ನಮಗೆ ದೆಹಲಿಗೆ ಹೋಗಲು ನೆರವು ನೀಡಬೇಕು ಎಂದು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಮಾತನಾಡುತ್ತ ಯೋಧನ ಹನುಮಂತಪ್ಪ ತಾಯಿ ಬಸವ್ವ ಮನವಿ ಮಾಡಿಕೊಂಡಿದ್ದಾರೆ.
ನಮಗೆ ಅಷ್ಟು ದೂರ ಹೋಗಿ ಮಗನನ್ನು ನೋಡೋವಷ್ಟು ಸ್ಥಿತಿವಂತರಲ್ಲ. ಹಾಗಾಗಿ ಮಗನನ್ನು ದೆಹಲಿಗೆ ಹೋಗಿ ನೋಡಲು ಸರ್ಕಾರ ನೆರವು ನೀಡ್ಬೇಕು ಎಂದು ತಾಯಿ ವಿನಂತಿ ಮಾಡಿಕೊಂಡಿರು.
ದೇವರು ನಮಗೆ ಸಹಾಯ ಮಾಡಿದ್ದಾನೆ. ನಮ್ಮೆಲ್ಲಿರಿಗೂ ಈಗ ತುಂಬಾ ಸಂತೋಷ ಆಗಿದೆ. ಆತನಿಗೆ ಹನುಮಾನ್ ಅಂತ ಹೆಸರಿಟ್ಟಿದ್ದಕ್ಕೆ ಸಾವು ಗೆದ್ದು ಬಂದಿದ್ದಾನೆ ಎಂದು ಯೋಧನ ಸಂಬಂಧಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ ಆತ ವಾಯು ಪುತ್ರ ಹನುಮಾನ್. ಹೀಗಾಗಿ ಆತ ಬದುಕಿ ಬಂದೇ ಬರುತ್ತಾನೆ ಎಂಬ ನಂಬಿಕೆ ಇದೆ ಅವರು ಹೇಳಿದ್ದಾರೆ.
ಯೋಧನ ಕುಟುಂಬ ದೆಹಲಿಗೆ:ಕುಲಕರ್ಣಿ
ಯೋಧ ಹನುಮಂತಪ್ಪ ಕೊಪ್ಪದ್ ಅವರ ಕುಟುಂಬ ವರ್ಗ ದೆಹಲಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ತಿಳಿಸಿದ್ದಾರೆ. ಯೋಧನ ಕುಟುಂಬ ವರ್ಗ ಆತಂಕ ಪಡೋದು ಬೇಡ, ಇಂದು ಸಂಜೆಯೇ ಅವರನ್ನು ದೆಹಲಿಗೆ ಕಳುಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
SCROLL FOR NEXT