ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್
ಸಿಯಾಚಿನ್‌ನಲ್ಲಿ 6 ದಿನಗಳ ಕಾಲ 25 ಅಡಿ ಹಿಮದಡಿಯಲ್ಲಿ ಸಿಲುಕಿದ್ದ ಕರ್ನಾಟಕದ ಯೋಧ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಬದುಕುಳಿಯಲು ಸಹಾಯ ಮಾಡಿದ್ದು ಯೋಗ!. ಹೌದು, ಯೋಗಾಭ್ಯಾಸದ ಬಲದಿಂದಲೇ ಹನುಮಂತಪ್ಪ ಸಾವಿನ ದವಡೆಯಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಮೈನಸ್ 30 ರಿಂದ ಮೈನಸ್ 50 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಿರುವ ಸಿಯಾಚಿನ್ ನಿರ್ಗಲ್ಲು, ಎಡೆಬಿಡದೆ ಬೀಳುವ ಹಿಮಮಳೆ, ಹಿಮಪಾತ ಇವುಗಳನ್ನೆಲ್ಲ ಎದುರಿಸಿ ಪವಾಡಸದೃಶವಾಗಿ ಪಾರಾಗಿದ್ದ ಹನುಮಂತಪ್ಪ ಈಗ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದಾರೆ.
ಅದೇ ವೇಳೆ ಉತ್ತರ ಸಿಯಾಚಿನ್‌ನ 19,600 ಅಡಿ ಎತ್ತರದಲ್ಲಿ ಹಿಮಪಾತವಾಗಿದ್ದು, 33ರ ಹರೆಯದ ಹನುಮಂತಪ್ಪ ಏರ್ ಪಾಕೆಟ್‌ನ ಸಹಾಯದಿಂದಲೇ ಅಷ್ಟು ದಿನ ಬದುಕಿದ್ದಾರೆ ಎನ್ನಲಾಗುತ್ತಿದೆ . ಹಿಮಪಾತವನ್ನು ಹೇಗೆ ಎದುರಿಸಬೇಕೆಂಬುದನ್ನು ಸೈನಿಕರಿಗೆ ಕಲಿಸಿಕೊಡಲಾಗುತ್ತದೆ.
ಹನುಮಂತಪ್ಪ ಏನು ಮಾಡಿರಬಹುದು?
ಹಿಮಪಾತಕ್ಕೆ ಸಿಲುಕಿದರೆ ಮಂಜುಗಡ್ಡೆಯ ಮೇಲೆ ತೇಲಲು ಯತ್ನಿಸಬೇಕು. ಹೀಗೆ ತೇಲುತ್ತಾ ಮಂಜುಗಡ್ಡೆಯ ಹೊರ ಆವರಣದಲ್ಲಿ ಇರಲು ಪ್ರಯತ್ನಿಸಬೇಕು ಎಂಬುದನ್ನು ಸೈನಿಕರಿಗೆ ಹೇಳಿ ಕೊಡಲಾಗುತ್ತದೆ. ಆದರೆ 25 ಅಡಿಯಲ್ಲಿ ಹನುಮಂತಪ್ಪ ಪತ್ತೆಯಾಗಿದ್ದರು. ಆದ್ದರಿಂದ ಈ ರೀತಿ ಮಾಡಿರಲು ಅವರಿಗೆ ಸಾಧ್ಯವಾಗದಿರಬಹುದು.
ಇನ್ನೊಂದು ರೀತಿಯೆಂದರೆ ದೇಹವನ್ನು ಭ್ರೂಣದಲ್ಲಿರುವ ಮಗುವಿನ ಆಕಾರಕ್ಕೆ ಬಗ್ಗಿಸಿ ಏರ್‌ಪಾಕೆಟ್‌ನ್ನು ಬಳಸಿರಬಹುದು. ಆ ಏರ್ ಪಾಕೆಟ್ ಆತನಿಗೆ ಉಸಿರಾಡಲು ಸಹಾಯ ಮಾಡಿದ್ದು, ದೇಹವನ್ನು ಬೆಚ್ಚಗಿರಿಸಿದೆ.
ಸಿಯಾಚಿನ್‌ನಲ್ಲಿ ಸರಿಯಾಗಿ ಮುಂಜಾಗ್ರತಾ ಕ್ರಮಗಳನ್ನು ತೆಗದುಕೊಳ್ಳದೆ ನಾಲ್ಕು ಗಂಟೆಗಳ ಕಾಲ ಹಿಮಪಾತವನ್ನು ಎದುರಿಸುವುದು ಕಷ್ಟ. ಬದುಕಿಗೇ ಇದು ಸಂಚಕಾರವನ್ನು ತಂದೊಡ್ಡುತ್ತದೆ. ಆದರೆ ಆರು ದಿನಗಳ ಕಾಲ ಹನುಮಂತಪ್ಪ ಬದುಕಿದ್ದೇ ಪವಾಡ ಎಂದು ಹಿರಿಯ ಸೈನ್ಯಾಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಯೋಗಾಭ್ಯಾಸದ ಬಲದಿಂದ ಅತೀ ಎತ್ತರದ ಪ್ರದೇಶದಲ್ಲಿದ್ದರೂ ಅಲ್ಲಿ ಸಿಗುವ ಆಕ್ಸಿಜನ್‌ನ್ನು ಸರಿಯಾಗಿ ಬಳಸಿಕೊಳ್ಳುವ ಶಕ್ತಿ ಯೋಗ ಮಾಡುವವರ ಶ್ವಾಸಕೋಶಕ್ಕಿರುತ್ತದೆ ಎಂದು ಯೋಗಗುರು ರಾಮ್‌ದೇವ್ ಬಾಬಾ ಹೇಳಿದ್ದರು. ಅಂದರೆ ಹನುಮಂತಪ್ಪನಿಗೆ ಯೋಗ ಗೊತ್ತಿತ್ತು. ಆ ಯೋಗವೇ ಆತನಿಗೆ ರಕ್ಷೆಯಾಯಿತು.