ಪ್ರಧಾನ ಸುದ್ದಿ

ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಿಸಿ ತಟ್ಟದ ಏಕೈಕ ದೇಶ ಭಾರತ: ಪ್ರಧಾನಿ ಮೋದಿ

Lingaraj Badiger
ನವದೆಹಲಿ: ಜಗತ್ತನ್ನು ಕಾಡುತ್ತಿರುವ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಿಸಿ ತಟ್ಟದ ಏಕೈಕ ದೇಶ ಭಾರತ, ಇದಕ್ಕೆ ಮುಖ್ಯ ಕಾರಣ ಸರ್ಕಾರ ಜಾರಿಗೊಳಿಸುತ್ತಿರುವ ನೀತಿಗಳು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದ್ದಾರೆ.
ಇಂದು ಸಮಾಜ ಸುಧಾರಕ ದಯಾನಂದ ಸರಸ್ವತಿ ಅವರ 140ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ‘ವಿಶ್ವಬ್ಯಾಂಕ್, ಐಎಂಎಫ್ ಸೇರಿದಂತೆ ಪ್ರತಿಯೊಬ್ಬರೂ ಇದನ್ನೇ ಹೇಳುತ್ತಿದ್ದಾರೆ… ಜಗತ್ತು ಆರ್ಥಿಕ ಬಿಕ್ಕಟ್ಟಿನ ಹಾದಿಯಲ್ಲಿ ಸಾಗುತ್ತಿದೆ ಎಂದು, ಆದರೆ ಭಾರತ ಮಾತ್ರವೇ ತ್ವರಿತ ಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಇದು ವಿಶೇಷ ಪರಿಸ್ಥಿತಿ. ಇಡೀ ಜಗತ್ತು ಜಾರುತ್ತಿರುವಾಗ ಭಾರತ ಬೆಳೆಯುತ್ತಿದೆ’ಎಂದರು,
‘ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಗಳಿಂದಾಗಿ ಭಾರತ ತ್ವರಿತ ಗತಿಯ ಆರ್ಥಿಕ ಬೆಳವಣಿಗೆ ಸಾಧಿಸಲು ಸಾಧ್ಯವಾಗಿದೆ ಎಂದು ಜಗತ್ತಿನಾದ್ಯಂತ ಜನ ಹೇಳುತ್ತಿದ್ದಾರೆ’ ಎಂದು ಪ್ರಧಾನಿ ತಿಳಿಸಿದರು.
‘ನಮ್ಮ ಸಮಸ್ಯೆಗಳು, ಬಡತನ, ಶೈಕ್ಷಣಿಕ ಅಭಾವ ಇತ್ಯಾದಿಗಳಿಂದ ನಮ್ಮನು ಮುಕ್ತಗೊಳಿಸುವ ಏಕೈಕ ಮಾರ್ಗ ಅಭಿವೃದ್ಧಿ’ ಎಂದು ಮುದ್ರಾ, ಕೌಶಲ್ಯ ಅಭಿವೃದ್ಧಿ ಇತ್ಯಾದಿಯಾಗಿ ತಮ್ಮ ಸರ್ಕಾರದ ಸಾಮಾಜಿಕ-ಆರ್ಥಿಕ ಕಾರ್ಯಕ್ರಮಗಳನ್ನು ಉಲ್ಲೇಖಿಸುತ್ತಾ ಮೋದಿ ವಿವರಿಸಿದರು. ಮುದ್ರಾ ಯೋಜನೆಯಡಿ 2 ಕೋಟಿಗೂ ಹೆಚ್ಚು ಜನರಿಗೆ ಅನುಕೂಲವಾಗಿದೆ. ಒಂದು ಲಕ್ಷ ಕೋಟಿ ರೂಪಾಯಗಳಿಗೂ ಹೆಚ್ಚಿನ ಹಣವನ್ನು ಅವರಿಗೆ ವಿತರಿಸಲಾಗಿದೆ ಎಂದು ಪ್ರಧಾನಿ ಹೇಳಿದರು.
SCROLL FOR NEXT