ನವದೆಹಲಿ: ದೇಶ ದ್ರೋಹದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಜವಾರ್ ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ ಯು)ದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ದೇಶ ವಿರೋಧಿ ಘೋಷಣೆ ಕೂಗುತ್ತಿದ್ದರು ಎಂದು ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ ಅವರು ಸೋಮವಾರ ಹೇಳಿದ್ದಾರೆ.
ವಿವಿಯಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಕನ್ಹಯ್ಯ ಸೇರಿದಂತೆ ಏಳು ಆರೋಪಿಗಳ ವಿಚಾರಣೆ ಬಳಿಕ ಮಾತನಾಡಿದ ಬಸ್ಸಿ, ಕನ್ಹಯ್ಯ ಕುಮಾರ್ ಅವರು ದೇಶ ವಿರೋಧಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ರಾಷ್ಟ್ರ ವಿರೋಧಿ ಘೋಷಣೆ ಕೂಗಿದ್ದಾರೆ ಎಂದು ಹೇಳಿದರು.
ನಾವು ಯಾವುದೇ ಮುಗ್ಧರನ್ನು ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿರುವ ದೆಹಲಿ ಪೊಲೀಸ್ ಆಯುಕ್ತರು, ದೇಶದ್ರೋಹದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ವಿದ್ಯಾರ್ಥಿಳಿಗೆ ಸಂಬಂಧಿಸಿದಂತೆ ನಮ್ಮ ಬಳಿ ಸಾಕಷ್ಟು ಫೋಟೋ ಮತ್ತು ವಿಡಿಯೋ ಸಾಕ್ಷ್ಯ ಇದೆ ಎಂದು ಹೇಳಿದ್ದಾರೆ.
ಸಂಸತ್ ಮೇಲೆ ದಾಳಿ ನಡೆಸಿದ ಉಗ್ರ ಅಫ್ಜಲ್ ಗುರು ಗಲ್ಲಿಗೇರಿಸಿದ್ದನ್ನು ಖಂಡಿಸಿ ವಿದ್ಯಾರ್ಥಿಗಳ ಗುಂಪೊಂದು ವಿವಿಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಈ ವೇಳೆ ಕೆಲವು ವಿದ್ಯಾರ್ಥಿಗಳು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ ಕಾರಣಕ್ಕಾಗಿ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೇರಿದಂತೆ ಏಳು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.