ಪ್ರಧಾನ ಸುದ್ದಿ

ವೀರಯೋಧ ಸಹದೇವ ಮೋರೆ ಪಂಚಭೂತಗಳಲ್ಲಿ ಲೀನ

Lingaraj Badiger
ವಿಜಯಪುರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಶನಿವಾರ ಹುತಾತ್ಮರಾದ ವೀರಯೋಧ ವೀರಯೋಧ ಸಹದೇವ ಮಾರುತಿ ಮೋರೆ ಅವರು ಸೋಮವಾರ ಪಂಚಭೂತಗಳಲ್ಲಿ ಲೀನವಾದರು.
ಇಂದು ಬೆಳಗ್ಗೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸಾವಳಸಂಗ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಯೋಧನ ಅಂತ್ಯಕ್ರಿಯೆ ನೆರವೇರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್, ಜಿಲ್ಲಾಧಿಕಾರಿ ಸೇರಿದಂತೆ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ವೀರಯೋಧ ಸಹದೇವ ಮಾರುತಿ ಮೋರೆ ಅವರ ಪಾರ್ಥಿವ ಶರೀರಕ್ಕೆ ತಂದೆ ಮಾರುತಿ ಮೋರೆ ಅಗ್ನಿಸ್ಪರ್ಶ ಮಾಡಿದರು. ಸಾವಳಸಂಗ ಗ್ರಾಮದ ಹೊರವಲಯದಲ್ಲಿರುವ ಸ್ವಂತ ಜಮೀನಿನಲ್ಲೇ ಸಹದೇವ ಮೋರೆ ಅವರ ಮನೆ ಇದ್ದು, ಮನೆ ಸಮೀಪದ ಜಮೀನಿನಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಇದೇ ವೇಳೆ ಬಿಎಲ್ ಡಿ ಅಧ್ಯಕ್ಷರಾಗಿರುವ ಸಚಿವ ಎಸ್.ಆರ್.ಪಾಟೀಲ್ ಅವರು ಯೋಧನ ತಂದೆ ಮಾರುತಿ ಮೋರೆ ಅವರಿಗೆ ಬಿಎಲ್ ಡಿ ವತಿಯಿಂದ 5 ಲಕ್ಷ ರುಪಾಯಿ ಪರಿಹಾರದ ಚೆಕ್ ಅನ್ನು ನೀಡಿದರು.
ಇನ್ನು ಸರ್ಕಾರದ ವತಿಯಿಂದ 25 ಲಕ್ಷ ರುಪಾಯಿ, ನಾಲ್ಕು ಎಕರೆ ಜಮೀನು, ಕುಟುಂಬ ಬಯಸಿದ ಯಾವುದೇ ಜಿಲ್ಲೆಯಲ್ಲಿ ಒಂದು ನಿವೇಶನ ಮತ್ತು ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಲಾಗುವುದು ಎಂದು ಪಾಟೀಲ್ ತಿಳಿಸಿದರು.
ನಿನ್ನೆ ಬೆಳಗಾವಿಯಿಂದ ಸೇನಾ ಹೆಲಿಕಾಪ್ಟರ್ ನಲ್ಲಿ ವಿಜಯಪುರದ ಸೈನಿಕ ಶಾಲೆಯ ಹೆಲಿಪ್ಯಾಡ್ ತಂದಿದ್ದ ಯೋಧನ ಮೃತದೇಹವನ್ನು ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ಸ್ವೀಕರಿಸಿದ್ದರು.
SCROLL FOR NEXT