ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ನಲ್ಲಿ ಸಂಭವಿಸಿದ ಭೀಕರ ಹಿಮಪಾತಕ್ಕೆ ಸಿಲುಕಿ ಹುತಾತ್ಮರಾಗಿದ್ದ ಹಾಸನದ ಯೋಧ ಸುಬೇದಾರ್ ನಾಗೇಶ್ ಮತ್ತು ಮೈಸೂರಿನ ಯೋಧ ಸಿಪಾಯಿ ಮಹೇಶ್ ಅವರ ಪಾರ್ಥಿವ ಶರೀರಗಳು ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಇಂದು ಸಂಜೆ ತಲುಪಿದೆ.
ವಿಮಾನ ನಿಲ್ದಾಣದಲ್ಲಿ ಹಾಜರಿದ್ದ ಸಚಿವ ಕೆ.ಜೆ.ಜಾರ್ಜ್ ಪಾರ್ಥಿವ ಶರೀರಗಳಿಗೆ ಗೌರವ ವಂದನೆ ಸಲ್ಲಿಸಿದರು. ಜತೆಗೆ ಎಡಿಸಿಪಿ ಹರಿಶೇಖರನ್, ಡಿಸಿಪಿ ಬೋರಲಿಂಗಯ್ಯ ಉಪಸ್ಥಿತರಿದ್ದರು.
ಪ್ಯಾರಾಚೂಟ್ ರೆಜಿಮೆಂಟ್ನ 80 ಯೋಧರು, ಎಎಸ್ಸಿ ಸೆಂಟರ್ನ ಉತ್ತರ ವಿಭಾಗದ 54 ಮತ್ತು ದಕ್ಷಿಣ ವಿಭಾಗದ 94 ಯೋಧರು ವಿಮಾನ ನಿಲ್ದಾಣದಲ್ಲಿ ಹುತಾತ್ಮ ಯೋಧರಿಗೆ ಗೌರವ ವಂದನೆ ಸಲ್ಲಿಸಿದರು.
ವಿಮಾನ ನಿಲ್ದಾಣದಿಂದ ಯೋಧರ ಪಾರ್ಥಿವ ಶರೀರಗಳನ್ನು ರಸ್ತೆ ಮಾರ್ಗದ ಮೂಲಕ ಅವರವರ ಸ್ವಗ್ರಾಮಗಳಿಗೆ ಕಳುಹಿಸಲಾಗುತ್ತಿದೆ.
ನಾಳೆ ಹಾಸನದ ಡಿಸಿ ಕಚೇರಿ ಮುಂದೆ ಸುಬೇದಾರ್ ನಾಗೇಶ್ ಅವರ ಪಾರ್ಥಿವ ಶರೀರಗಳನ್ನು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.