ನವದೆಹಲಿ: ಪ್ರತಿಭಟನೆಯ ವೇಳೆಯಲ್ಲಿ ಜನರನ್ನು ಒತ್ತೆಯಿಟ್ಟುಕೊಂಡು ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ನಿಯಮಗಳನ್ನು ಹಾಕಲಿದ್ದೇವೆ ಎಂದಿರುವ ಸುಪ್ರೀಂ ಕೋರ್ಟ್ ಹೇಳಿದ್ದು. ದೇಶ ಎತ್ತ ನಡೆದಿದೆ ಎಂದು ಕಳವಳ ವ್ಯಕ್ತಪಡಿಸಿದೆ.
ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿ, ತಮ್ಮ ಬೇಡಿಕೆಗಳ ಪೂರೈಕೆಗಾಗಿ ಎಲ್ಲವನ್ನೂ ಒತ್ತೆಯಿಟ್ಟುಕೊಳ್ಳುವ ಹಕ್ಕು ಪ್ರತಿಭಟನಕಾರರಿಗೆ ಇಲ್ಲ ಎಂದಿರುವ ನ್ಯಾಯಾಧೀಶ ಜಗದೀಶ್ ಸಿಂಗ್ ಖೇಕರ್ ಮತ್ತು ನ್ಯಾಯಾಧೀಶ ಸಿ ನಾಗಪ್ಪನ್ ಒಳಗೊಂಡ ನ್ಯಾಯಪೀಠ, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದವರು ಮುಂದಿನ ಕ್ರಮಗಳನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
"ಏನು ನಡೆಯುತ್ತಿದೆ? ನಮ್ಮ ದೇಶ ಎತ್ತ ನಡೆದಿದೆ. ದೇಶದ ಆಸ್ತಿಯನ್ನು ಸುಡುವ ಹಕ್ಕು ಯಾರಿಗೂ ಇಲ್ಲ. ಆದರೆ ಶಾಂತಿಯುತವಾಗಿ ಪ್ರತಿಭಟಿಸಬಹುದು. ಆದರೆ ಸುಡುವುದು, ಒಡೆದು ಹಾಕುವುದು.. ಇವುಗಳೆಲ್ಲ ಏನು?" ಎಂದು ಹರ್ಯಾಣದ ಜಾಟ್ ಪ್ರತಿಭಟನೆಯ ಬಗ್ಗೆ ಪರೋಕ್ಷವಾಗಿ ಚಾಟಿ ಬೀಸಿದೆ.
ಗುಜರಾತಿನ ಪಾಟಿದಾರ್ ಅನಾಮತ್ ಆಂದೋಲನ ಸಮಿತಿ ಅಧ್ಯಕ್ಷ ಹಾರ್ದಿಕ್ ಪಟೇಲ್ ಅವರನ್ನು ಗುಜರಾತ್ ಪೊಲೀಸರು ದೇಶದ್ರೋಹದಡಿ ಬಂಧಿಸಿರುವುದನ್ನು ಪ್ರಶ್ನಿಸಿ, ಆ ಪ್ರಕರಣವನ್ನು ಕೈಬಿಡುವಂತೆ ಕೋರಿ ಸಲ್ಲಿಸಿದ್ದ ವಿಚಾರಣೆ ವೇಳೆಯಲ್ಲಿ ಸುಪ್ರೀಮ್ ಕೋರ್ಟ್ ಮೇಲಿನ ಪ್ರತಿಕ್ರಿಯೆ ನೀಡಿದೆ.
ಸಾರ್ವಜನಿಕ ಆಸ್ತಿ ಹಾನಿಯಾದರೆ ಅದಕ್ಕೆ ಕಾರಣರಾದ ಜನ ಮತ್ತು ರಾಜಕೀಯ ಪಕ್ಷಗಳು ದಂಡ ಕಟ್ಟಬೇಕು, ಇದರ ಬಗ್ಗೆ ನಾವು ಗಮನ ಹರಿಸಿ ನಿಯಮಾವಳಿಗಳನ್ನು ಹಾಕಲಿದ್ದೇವೆ ಎಂದು ಕೂಡ ಕೋರ್ಟ್ ಹೇಳಿದೆ.
ಸೆಶನ್ ಕೋರ್ಟ್ ನಲ್ಲಿ ಇತ್ಯರ್ಥವಾಗುವವರೆಗೆ ನಾವು ಜಾಮೀನು ವಿಚಾರಣೆ ಕೈಗೆತ್ತಿಕೊಳ್ಳಲು ಬರುವುದಿಲ್ಲ ಎಂದು ಸುಪ್ರೀಮ್ ಕೋರ್ಟ್, ಹಾರ್ದಿಕ್ ಪಟೇಲ್ ಅರ್ಜಿಯ ವಿಚಾರವಾಗಿ ತಿಳಿಸದೆ.