ಪ್ರಧಾನ ಸುದ್ದಿ

ಪಟಿಯಾಲ ಹೌಸ್ ಕೋರ್ಟ್ ಹಿಂಸೆಯನ್ನು ನಾನು ಖಂಡಿಸುತ್ತೇನೆ: ರಾಜನಾಥ್

Guruprasad Narayana

ನವದೆಹಲಿ: ದೇಶದ್ರೋಹದ ಆರೋಪದ ಮೇಲೆ ಬಂಧಿತರಾಗಿರುವ ಜೆ ಎನ್ ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರನ್ನು ಕೋರ್ಟ್ ನಲ್ಲಿ ಹಾಜರುಪಡಿಸುವಾಗ, ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಪತ್ರಕರ್ತರ ಮೇಲೆ ಕೆಲವು ವಕೀಲರು ನಡೆಸಿದ ಹಿಂಸೆಯನ್ನು ಖಂಡಿಸುವುದಾಗಿ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದು, ಈ ಪ್ರಕರಣದ ಸತ್ಯಾಂಶಗಳು ತಿಳಿದ ಮೇಲೆ ದೆಹಲಿ ಪೊಲೀಸರು ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದಿದ್ದಾರೆ.

ಕೋರ್ಟ್ ಆವರಣದಲ್ಲಿ ವಕೀಲರ ಒಂದು ವರ್ಗ ಹಲವಾರು ಪತ್ರಕರ್ತರನ್ನು ಥಳಿಸಿದ್ದರು.

ಸಿ ಪಿ ಐ ಕಾರ್ಯಕರ್ತರನ್ನು ಥಳಿಸಿದ್ದ ಬಿಜೆಪಿ ಶಾಸಕ ಒ ಪಿ ಶರ್ಮಾ ಅವರನ್ನು ಮೊದಲು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

"ಪಟಿಯಾಲ ಹೌಸ್ ಕೋರ್ಟ್ ಘಟನೆ ದುರದೃಷ್ಟಕರ. ನಾನಿದನ್ನು ಖಂಡಿಸುತ್ತೇನೆ. ಶಾಸಕನನ್ನು ಬಂಧಿಸಿ ಅವರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ತನಿಖೆ ಮುಂದುವರೆಯುತ್ತಿದೆ. ಅದು ನಡೆಯಲಿ" ಎಂದು ಸಿಂಗ್ ಹೇಳಿದ್ದಾರೆ.

ಫೆಬ್ರವರಿ ೧೫ ರಂದು ನಡೆದ ಹಿಂಸೆಯ ನಂತರ ದೆಹಲಿ ಪೊಲೀಸ್ ಕಮಿಷನರ್ ಬಿ ಎಸ್ ಬಸ್ಸಿ ಅವರೊಂದಿಗೆ ಮಾತನಾಡಿದ್ದಾಗಿ ರಾಜನಾಥ್ ತಿಳಿಸಿದ್ದಾರೆ. ಅದಾದ ಎರಡು ದಿನಗಳ ನಂತರವೂ ಕೋರ್ಟ್ ನಲ್ಲಿ ಹಿಂಸಾಚಾರವಾಗಿತ್ತು.

"ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದೇನೆ. ದೆಹಲಿ ಪೊಲೀಸರು ಯಾವುದೇ ರೀತಿಯ ಅನ್ಯಾಯವೆಸಾಗಿರುವುದು ಎಂದು ತಿಳಿದುಬಂದರೆ ನ್ಯಾಯಾಲಯ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತದೆ. ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ದೆಹಲಿ ಪೊಲೀಸರು ಎಲ್ಲ ಕ್ರಮ ತೆಗೆದುಕೊಳ್ಳಲಿದ್ದಾರೆ" ಎಂದು ರಾಜನಾಥ್ ತಿಳಿಸಿದ್ದಾರೆ.

SCROLL FOR NEXT