ಪ್ರಧಾನ ಸುದ್ದಿ

ಜೆ ಎನ್ ಯು ವಿವಾದ: ಕನ್ಹಯ್ಯ ಜಾಮೀನು ವಿಚಾರಣೆ ಹೈಕೋರ್ಟ್ ನಲ್ಲಿ ಮರು ಪ್ರಾರಂಭ

Guruprasad Narayana

ನವದೆಹಲಿ: ದೇಶದ್ರೋಹಿ ಆರೋಪದ ಮೇಲೆ ಬಂಧಿತರಾಗಿರುವ ಜೆ ಎನ್ ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರ ಜಾಮೀನು ವಿಚಾರಣೆ ಸೋಮವಾರ ಮತ್ತೆ ದೆಹಲಿ ಹೈಕೋರ್ಟ್ ನಲ್ಲಿ ಪ್ರಾರಂಭವಾಗಲಿದೆ.

ಫೆಬ್ರವರಿ ೨೪ರಂದು ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್, ದೆಹಲಿ ಪೊಲೀಸರು ಕನ್ಹಯ್ಯ ಅವರನ್ನು ಇನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕೆಂದು ಕೋರಿದ್ದ ಮನವಿಗೆ ಮನ್ನಿಸಿ, ವಿಚಾರಣೆಯನ್ನು ೨೯ಕ್ಕೆ ಮುಂದೂಡಿತ್ತು.

ಫೆಬ್ರವರಿ ೨೫ ರಂದು ಕನ್ಹಯ್ಯ ಕುಮಾರ್ ಅವರನ್ನು ನ್ಯಾಯಾಂಗ ಬಂಧನದಿಂದ ವಶಕ್ಕೆ ಪಡೆದಿದ್ದ ಪೊಲೀಸರು, ಇನ್ನಿಬ್ಬರು ಜೆ ಎನ್ ಯು ವಿದ್ಯಾರ್ಥಿಗಳಾದ ಉಮರ್ ಖಲೀದ್ ಮತ್ತು ಅನಿರ್ಬಾನ್ ಭಟ್ಟಾಚಾರ್ಯ ಅವರೊಂದಿಗೆ ವಿಚಾರಣೆ ನಡೆಸಿದ್ದರು. ಈ ವಿಚಾರಣೆಯ ಪ್ರಗತಿಯ ವಿವರಗಳನ್ನು ಪೊಲೀಸರು ಇಂದು ಕೋರ್ಟಿಗೆ ಸಲ್ಲಿಸುವ ಸಾಧ್ಯತೆ ಇದೆ.

ನಂತರ ಫೆಬ್ರವರಿ 26 ರಂದು ಕನ್ಹಯ್ಯ ಅವರನ್ನು ನ್ಯಾಯಂಗ ಬಂಧನಕ್ಕೆ ಮತ್ತೆ ಒಪ್ಪಿಸಲಾಗಿತ್ತು. ಕನ್ಹಯ್ಯ ಅವರನ್ನು ದೆಹಲಿ ಪೊಲೀಸರು ಫೆಬ್ರವರಿ ೧೨ರಂದು ಬಂಧಿಸಿದ್ದರು.

ಫೆಬ್ರವರಿ ೨೩ರಂದು ಪೊಲೀಸರಿಗೆ ಶರಣಾಗಿದ್ದ ಉಮರ್ ಮತ್ತು ಅನಿರ್ಬಾನ್ ಇಂದಿಗೂ ಪೊಲೀಸರ ವಶದಲ್ಲಿದ್ದಾರೆ. ಈ ಮಧ್ಯೆ ಪೊಲೀಸರು ದೇಶದ್ರೋಹ ಆರೋಪ ಹೊರಿಸಿದ್ದ ಆರು ವಿದ್ಯಾರ್ಥಿಗಳ ಪೈಕಿ ಒಬ್ಬರಾದ ಅಶುತೋಶ್ ಕುಮಾರ್ ಅವರನ್ನು ಕೂಡ ನೆನ್ನೆ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

SCROLL FOR NEXT