ಪ್ರಧಾನ ಸುದ್ದಿ

ಕನ್ಹಯ್ಯ, ಗಿಲಾನಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಣೆ

Guruprasad Narayana

ನವದೆಹಲಿ: ಜವಹಾರ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ ಮತ್ತು ಇತರ ಐದು ವಿದ್ಯಾರ್ಥಿಗಳು ಹಾಗು ಮಾಜಿ ಪ್ರಾಧ್ಯಾಪಕ ಎಸ್ ಎ ಆರ್ ಗಿಲಾನಿ ಅವರ ವಿರುದ್ಧ ಸಲ್ಲಿಸಿದ್ದ ನ್ಯಾಯಂಗ ನಿಂದನೆ ಅರ್ಜಿಯನ್ನು ವಿಚಾರಣೆ ಮಾಡಲು ಸುಪ್ರಿಂ ಕೋರ್ಟ್ ನಿರಾಕರಿಸಿದೆ.

ಈ ಅರ್ಜಿ ವಿಚಾರಣೆ ಆಲಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಅದಕ್ಕೂ ಮುಂಚಿತವಾಗಿ ಅಟಾರ್ನಿ ಜನರಲ್ ಅವರ ಅನುಮತಿ ಪಡೆಯುವಂತೆ ಅರ್ಜಿದಾರನಿಗೆ ತಿಳಿಸಿದೆ.

೨೦೦೧ರ ಸಂಸತ್ ದಾಳಿ ಪ್ರಕರಣದಲ್ಲಿ ಅಫ್ಜಲ್ ಗುರುವನ್ನು ಗಲ್ಲಿಗೆ ಏರಿಸಿದ್ದ ತೀರ್ಪನ್ನು ಪ್ರಶ್ನಿಸಿದ್ದ ಹಾಗು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದರು ಎಂದು ಆರೋಪಿಸಿ ವಿದ್ಯಾರ್ಥಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಅರ್ಜಿದಾರ ಕೋರಿದ್ದರು.

ನ್ಯಾಯಾಂಗದ ಕೊಲೆಗಳು ಎಂದು ಕರೆದು ವಿದ್ಯಾರ್ಥಿಗಳು ಅಭಿವ್ಯಕ್ತಿ ಸ್ವಾತಂತ್ರದ ಎಲ್ಲೆ ಮೀರಿದ್ದಾರೆ ಎಂದು ಅರ್ಜಿ ಸಲ್ಲಿಸಲಾಗಿತ್ತು. "ಯುವ ಜನತೆಯನ್ನು ದೇಶದ ಭವಿಷ್ಯ ಎಂದು ನೋಡಲಾಗುತ್ತದೆ ಆದರೆ ಈ ಘಟನೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಮತ್ತು ಮೂಲಭೂತ ಹಕ್ಕುಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ" ಎಂದು ಅರ್ಜಿಯಲ್ಲಿ ಬರೆಯಲಾಗಿದೆ.

ಈ ಮಧ್ಯೆ ಕನ್ಹಯ್ಯ ಅವರ ಜಾಮೀನು ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಇಂದು ಮುಂದುವರೆಸಲಿದೆ. 

SCROLL FOR NEXT