ಪಠಾಣ್ ಕೋಟ್: ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆಯಲ್ಲಿ ಶನಿವಾರ ಮಧ್ಯಾಹ್ನ ಮತ್ತೆ ಗುಂಡಿನ ಮೊರೆತ ಕೇಳಿಬಂದಿದ್ದು, ವಾಯುನೆಲೆಯಲ್ಲಿ ಮತ್ತಷ್ಟು ಉಗ್ರರು ಅವಿತಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ.
ಈ ಹಿನ್ನಲೆಯಲ್ಲಿ ಅವಿತಿರುವ ಉಗ್ರರಿಗಾಗಿ ಭಾರತೀಯ ಸೇನೆಯ ಸೈನಿಕರು ಶೋಧ ಕಾರ್ಯ ನಡೆಸುತ್ತಿದ್ದು, ಕಾರ್ಯಾಚರಣೆಗೆ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ಅನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಸೇನಾ ವಾಯುನೆಲೆಯಲ್ಲಿ ಉಗ್ರರು ಅವಿತಿರುವ ಕುರಿತು ಮಾಹಿತಿ ಲಭ್ಯವಾಗಿದೆಯಾದರೂ, ಎಷ್ಟು ಮಂದಿ ಉಗ್ರರು ಇದ್ದಾರೆ ಎಂಬ ಖಚಿತ ಮಾಹಿತಿ ಇಲ್ಲ. ಹೀಗಾಗಿ ಸೇನಾಧಿಕಾರಿಗಳು ಹೆಚ್ಚುವರಿ ಸೈನಿಕರನ್ನು ಕಾರ್ಯಾಚರಣೆಗೆ ಇಳಿಸಲು ಮುಂದಾಗಿದ್ದಾರೆ.
ಮೂಲಗಳ ಪ್ರಕಾರ ವಾಯುಸೇನೆಯ ಎರಡು ಸಮರ ಹೆಲಿಕಾಪ್ಟರ್ ಗಳು ಕಾರ್ಯಾಚರಣೆಗೆ ಇಳಿದಿದ್ದು, ಗುಂಡಿನ ಮೊರೆತ ಕೇಳಿಬರುತ್ತಿರುವ ಜಾಗಗಳ ಮೇಲೆ ದಾಳಿ ನಡೆಸಲು ಸಜ್ಜಾಗಿವೆ. ಅಲ್ಲದೆ ಕಾರ್ಯಾಚರಣೆಗೆ ಡ್ರೋನ್ ಗಳನ್ನು ಬಳಕೆ ಮಾಡಿಕೊಳ್ಳಲು ಸೇನೆ ನಿರ್ಧರಿಸಿದ್ದು, ಅವಿತಿರುವ ಉಗ್ರರಿಗಾಗಿ ಶೋಧ ನಡೆಸಲಾಗುತ್ತಿದೆ.
ಪಾಕಿಸ್ತಾನ ಗಡಿಗೆ ಹತ್ತಿರವಿರುವ ಪಠಾಣ್ ಕೋಟ್ ವಾಯುನೆಲೆಯನ್ನು ಧ್ವಂಸಗೊಳಿಸಲು ಉಗ್ರರು ಹವಣಿಸಿದ್ದು, ಪಠಾಣ್ ಕೋಟ್ ನಲ್ಲಿರುವ ವಾಯುನೆಲೆಯ ಸೌಲಭ್ಯಗಳನ್ನು ಹಾನಿ ಮಾಡುವ ಉದ್ದೇಶದಿಂದಲೇ ಉಗ್ರರು ಈ ದಾಳಿ ನಡೆಸಿದ್ದಾರೆ ಎಂದು ಸೇನಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.