ಪ್ರಧಾನ ಸುದ್ದಿ

ಪಠಾನ್ ಕೋಟ್ ದಾಳಿಯ ಬಗ್ಗೆ ಮೌನ ಮುರಿಯಿರಿ: ಮೋದಿಗೆ ಆಂಟನಿ ಆಗ್ರಹ

Guruprasad Narayana

ತಿರುವನಂತಪುರಮ್: ಪಂಜಾಬಿನ ಪಠಾನ್ ಕೋಟ್ ನ ಭಾರತೀಯ ವಾಯುನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಮೌನ ಮುರಿಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಭದ್ರತಾ ಸಚಿವ ಎ ಕೆ ಆಂಟನಿ ಗುರುವಾರ ಆಗ್ರಹಿಸಿದ್ದಾರೆ.

"ಇದು ಗಂಭೀರ ಭದ್ರತಾ ಲೋಪ ಮತ್ತು ಇದರ ಬಗ್ಗೆ ಬಹಳಷ್ಟು ಸುಳಿವುಗಳಿದ್ದವು.. ಆದರೆ ಯಾವುದೂ ಕ್ರಮಗಳನ್ನು ಕೈಗೊಂಡಿರಲಿಲ್ಲ. ಆದುದರಿಂದ ಏನು ನಡೆಯಿತು ಎಂದು ದೇಶಕ್ಕೆ ಮೋದಿ ತಿಳಿಸಬೇಕು" ಎಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಆಂಟನಿ ಹೇಳಿದ್ದಾರೆ.

ಆರೋಗ್ಯ ತಪಾಸಣೆಗೆ ಅಮೆರಿಕಾಕ್ಕೆ ತೆರಳಿದ್ದ ಹಿರಿಯ ಕಾಂಗ್ರೆಸ್ ಮುಖಂಡ ದೇಶಕ್ಕೆ ಮರಳಿದ ನಂತರ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

"ಮೋದಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಮೇಲೆ ಈ ದಾಳಿ ನಡೆದಿದೆ. ಈ ದಾಳಿ ಹೇಗಾಯಿತು ಎಂದು ದೇಶಕ್ಕೆ ಗೊತ್ತಾಗಬೇಕಿದೆ. ಇದು ಗಂಭೀರ ವಿಷಯ. ಪ್ರಧಾನಿ ಇನ್ನೂ ಮೌನವಾಗಿ ಕೂರುವುದು ಸಮ್ಮತವಲ್ಲ ಬದಲಾಗಿ ಅವರು ಏನಾಯಿತು ಎಂದು ದೇಶಕ್ಕೆ ವಿವರಿಸಬೇಕು" ಎಂದು ಆಂಟನಿ ಹೇಳಿದ್ದಾರೆ.

ಶನಿವಾರ ಬೆಳಗ್ಗೆ ನಡೆದ ಈ ದಾಳಿಯಲ್ಲಿ ಏಳು ಜನ ಭದ್ರತಾ ಸಿಬ್ಬಂದಿ ಮೃತಪಟಿದ್ದರು ಹಾಗು ದಾಳಿಗೈದ ಎಲ್ಲಾ ಆರು ಉಗ್ರಗಾಮಿಗಳನ್ನು ಕೊಲ್ಲಲಾಗಿತ್ತು.

SCROLL FOR NEXT