ನವದೆಹಲಿ: ತಮಿಳು ನಾಡಿನಲ್ಲಿ ಪೊಂಗಲ್ ದಿನ ಗೂಳಿ ಓಟಕ್ಕೆ ಜಲ್ಲಿಕಟ್ಟಿಗೆ ಅವಕಾಶ ನೀಡಿದ್ದ ಕೇಂದ್ರ ಸರ್ಕಾರದ ಅಧಿಸೂಚನೆಗೆ ಸುಪ್ರೀಮ್ ಕೋರ್ಟ್ ಮಂಗಳವಾರ ತಡೆ ಹಾಕಿದೆ.
ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ವೇಳೆ ನಡೆಯುವ ಜಲ್ಲಿಕಟ್ಟು ಗೂಳಿ ಸ್ಪರ್ಧೆಗೆ ಇದ್ದ ನಿರ್ಬಂಧ ಸಡಿಲಿಸಿ, ಕೇಂದ್ರ ಸರಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ, ಪ್ರಾಣಿ ದಯಾ ಸಂಸ್ಥೆ ಪೇಟಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
ಈ ವಿಚಾರವಾಗಿ ತುರ್ತು ವಿಚಾರಣೆ ನಡೆಸುವಂತೆ ಭಾರತೀಯ ಪ್ರಾಣಿ ಕ್ಷೇಮಾಭಿವೃದ್ಧಿ ಮಂಡಳಿ, ಪೇಟಾ ಮತ್ತು ಬೆಂಗಳೂರು ಮೂಲದ ಎನ್‌ಜಿಒ ನಾಲ್ಕು ಸಂಘಟನೆಗಳು ಮೇಲ್ಮನವಿ ಸಲ್ಲಿಸಿದ್ದವು.
ಜಲ್ಲಿಕಟ್ಟು ಕ್ರೀಡೆಗೆ ಕೆಲವು ಷರತ್ತುಗಳನ್ನು ವಿಧಿಸಿ, ಕೇಂದ್ರ ಸರಕಾರ ಜನವರಿ 8ರಂದು ಹಿಂದಿನ ನಿರ್ಬಂಧಗಳನ್ನು ಸಡಿಲಿಸಿತ್ತು. ಈ ಹಬ್ಬದ ಸಂದರ್ಭದಲ್ಲಿ ನಡೆಯುವ ಜಲ್ಲಿಕಟ್ಟಿನಂತೆಯೇ ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಎತ್ತಿನ ಗಾಡಿ, ಹೋರಿ, ಕೋನ ಓಡಿಸುವ ಸ್ಪರ್ಧೆ ನಡೆಯುತ್ತದೆ. ಪ್ರಾಣಿ ಹಕ್ಕುಗಳ ಸಂಘಟನೆಗಳು ಜಲ್ಲಿಕಟ್ಟಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಜಲ್ಲಿಕಟ್ಟಿಗೆ ನಿರ್ಬಂಧ ಹೇರಲಾಗಿತ್ತು