ಬೆಂಗಳೂರು: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು, ನಾನಾ ಇಲಾಖೆಗಳ ಸಾವಿರಾರು ಅಧಿಕಾರಿಗಳು, ಅನೇಕ ಪ್ರಕಾರದ ಸಬ್ಸಿಡಿಗಳು, ಕೋಟ್ಯಂತರ ರೂಪಾಯಿಯ ಯೋಜನೆಗಳೆಲ್ಲವೂ ಇದ್ದರೂ ಅನ್ನ ಹಾಕುವ ರೈತನ ಮನೆಯ ಸೂತಕ ದೂರ ಮಾಡಲಿಲ್ಲ. ಹೊಸ ವರ್ಷದಲ್ಲಾದರೂ ಬಾಳಲ್ಲಿ ಬೆಳಕು ಬರಬಹುದು ಎನ್ನುವ ಆಶಾವಾದವೂ ನುಚ್ಚು ನೂರಾಗಿದ್ದು, ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಸಾವಿರ ದಾಟಿದೆ.
ರಾಜ್ಯದ ಇತಿಹಾಸದಲ್ಲಿ ಎಂದೂ ಕಂಡು ಕೇಳರಿಯದಷ್ಟು ಪ್ರಮಾಣದಲ್ಲಿ , ದಿಗಿಲು ಹುಟ್ಟಿಸುವ ಮಟ್ಟದಲ್ಲಿ ರೈತರ ಸರಣಿ ಸಾವು ಮುಂದುವರಿದಿದೆ. ಜನವರಿ 10ನೇ ತಾರೀಕಿಗೆ ಒಟ್ಟು 1002 ರೈತರು ರಾಜ್ಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚನ್ನೇನಹಳ್ಳಿಯಲ್ಲಿ 2015ರ ಜೂನ್ 18 ರಂದು ರಾಜೇಂದ್ರ ಅವರ ಸಾವು ರಾಜ್ಯದಲ್ಲಿ ರೈತರ ಆತ್ಮಹತ್ಯೆಯ ಸರಣಿಗೆ ಮುನ್ನುಡಿ ಬರೆಯಿತು. ಅಲ್ಲಿಂದ ಆರಂಭವಾದ ರೈತರ ಸಾವು 1002ಕ್ಕೆ ಬಂದು ನಿಂತಿದೆ.
ಕಂದಾಯ ಇಲಾಖೆ ದಾಖಲೆಗಳ ಪ್ರಕಾರ ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ತಾಲೂಕಿನ ವಿಜಯಪುರ ಬಳಿಯ ಧರ್ಮಪುರದ ನಿವಾಸಿ ಚಂದ್ರಶೇಖರ್ ಹಾಗೂ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದುಂಡಪ್ಪ ಅಡಿವೆಪ್ಪ ಬಾಕಳಿ 2016ರ ಜನವರಿ 10 ರಂದು ಸಾವಿಗೆ ಶರಣಾಗಿದ್ದಾರೆ. ಯಾರು ಎಷ್ಟೇ ಮಾತುಗಳನ್ನಾಡಿದರೂ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಶ್ರಮ ಮಾಡಲಿಲ್ಲ. ಕಂದಾಯ ಇಲಾಖೆಯ ವರದಿಯಲ್ಲಿ 18-6-2015 ರಿಂದ 12-1-2016 ರವರೆಗೆ ಒಟ್ಟು 1002 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪಾಂಡವಪುರ ತಾಲೂಕಿನ ಗಾಣದ ಹೊಸೂರು ಗ್ರಾಮದ ರಾಮೇಗೌಡ ಅವರ ಪುತ್ರ ನಿಂಗೇಗೌಡ (60) ಜು. 25ರಂದು ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿ, ಅದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಮಂಡ್ಯ ಜಿಲ್ಲೆಯಲ್ಲಿ 2ನೇ ಪ್ರಕರಣ. ಇವರಿಗೆ ಪತ್ನಿ, ಪುತ್ರ ಇದ್ದಾರೆ. ಅಂಗವಿಕಲರಾಗಿದ್ದರೂ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ
ಮದ್ದೂರು: ರೈತರ ಆತ್ಮಹತ್ಯೆಯ ಸರಣಿ ನಿಲ್ಲುವಂತೆ ಕಾಣುತ್ತಿಲ್ಲ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿಯಲ್ಲಿ ಮಂಗಳವಾರ ಸಾಲಬಾಧೆಯಿಂದ ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಸವನಗೂಳಯ್ಯ(63) ಆತ್ಮಹತ್ಯೆಗೆ ಶರಣಾದವರು. ಬತ್ತ, ಕಬ್ಬು ಬೆಳೆದಿದ್ದ ಗೂಳಯ್ಯ ರು.2 ಲಕ್ಷ ಕೈ ಸಾಲ ಮಾಡಿಕೊಂಡಿದ್ದರು. ಮಂಗಳವಾರ ಸಂಜೆ ಮನೆ ಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಸವನಗೂಳಯ್ಯ ಅವರ ಶವ ಪತ್ತೆಯಾಗಿದೆ. ಬೆಸಗರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀರಂಗಪಟ್ಟಣ ತಾಲೂಕು ಚಿನ್ನೇನಹಳ್ಳಿ ರಾಜೇಂದ್ರ (63) ತಮ್ಮ ಜಮೀನಿನಲ್ಲಿ ಕಳೆದ ಜೂ. 18ರಂದು ಆತ್ಮಹತ್ಯೆ ಮಾಡಿ ಕೊಂಡಿದ್ದರು. ಇದು ಮಂಡ್ಯ ಜಿಲ್ಲೆ ಹಾಗೂ ರಾಜ್ಯದಲ್ಲೇ ಪ್ರಥಮ ಪ್ರಕರಣ. ರಾಜೇಂದ್ರ ಬಿಎಸ್ಸಿ ಪದವೀಧರರಾಗಿದ್ದರು. ಒಟ್ಟು ರು.12 ಲಕ್ಷ ಸಾಲ ಮಾಡಿದ್ದರು.
ಈ ಪೈಕಿ 360 ಪರಿಹಾರಕ್ಕೆ ಅರ್ಹ ಪ್ರಕರಣಗಳಾಗಿದ್ದು, 275 ಪ್ರಕರಣಗಳು ನಾನಾ ಕಾರಣಗಳಿಂದ ತಿರಸ್ಕೃತ ಗೊಂಡಿವೆ. 368 ಪ್ರಕರಣ ಬಾಕಿ ಉಳಿದಿದ್ದು ಇವುಗಳ ನೈಜ ಕಾರಣವನ್ನು ಕಂದಾಯ ಅಧಿಕಾರಿಗಳು ಕಲೆ ಹಾಕುತ್ತಿ ದ್ದಾರೆ. ಈವರೆಗೆ ಸತ್ತ ರೈತರ ಪೈಕಿ 20 ವರ್ಷದೊಳಗಿ ನವರಲ್ಲಿ ಓರ್ವ, 20 ರಿಂದ 30 ವರ್ಷದೊಳಗಿನವರಲ್ಲಿ 109, 31 ರಿಂದ 40 ವಯೋಮಾನದವರಲ್ಲಿ 291, 51ರಿಂದ60 ವರ್ಷದೊಳಗಿನವರಲ್ಲಿ 224, 61ರಿಂದ70 ವರ್ಷದೊಳಗಿನವರಲ್ಲಿ 93, 70 ವರ್ಷ ಮೇಲ್ಪಟ್ಟ ವರಲ್ಲಿ 10 ಮಂದಿ ಇದ್ದಾರೆ. ಸಿಎಂ ಸಿದ್ದರಾಮ ಯ್ಯ ಪ್ರತಿನಿಧಿಸುವ ಮೈಸೂರು ಜಿಲ್ಲೆಯಲ್ಲಿ 64 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಮತ್ತೊಂದು ವಿಶೇಷ.
ನಾನಾ ಕಾರಣಗಳು: ರೈತರ ಸಾವಿಗೆ ನಾನಾ ಕಾರಣಗಳನ್ನು ಪತ್ತೆ ಹಚ್ಚಲಾಗಿದೆ. ಅತಿ ಹೆಚ್ಚು ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡಿದ್ದ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 280 ರೈತರು ರಾಷ್ಟ್ರೀಕೃತ ಬ್ಯಾಂಕು ಗಳಲ್ಲಿ ಸಾಲ ಪಡೆದಿದ್ದರು. ಪ್ರಾದೇಶಿಕ ಗ್ರಾಮೀಣ ಬ್ಯಾಂಕಿ ನಲ್ಲಿ 197, ಸಹಕಾರ ಬ್ಯಾಂಕ್‍ನಲ್ಲಿ 54, ಸಹಕಾರ ಸಂಘ ಗಳಲ್ಲಿ 48, ಸ್ಥಳೀಯವಾಗಿ (ಕೈಸಾಲ) 129 ಸಾಲ ಮಾಡಿ ಸಾವಿಗೀಡಾಗಿದ್ದರೆ, ಸಾಲ ಇಲ್ಲದಿರುವ 87,ಯಾವುದೇ ಮಾಹಿತಿ ಲಭ್ಯವಿಲ್ಲದ 66 ರೈತರು ಸಾವಿಗೆ ಶರಣಾಗಿದ್ದಾರೆ.
ಕೈಸುಟ್ಟ ಬೆಳೆಗಳು: ಸ್ಥಳೀಯ ವಾತಾವರಣ, ಭೂಮಿಯ ಫಲವತ್ತತೆ, ನೀರಿನ ಸೌಲಭ್ಯ ಹಾಗೂ ಹಣಕಾಸು ವ್ಯವಸ್ಥೆಯಿಂದಾಗಿ ಏಕ ಬೆಳೆಗೆ ಜೋತುಬಿದ್ದ ರೈತರು ಕೈ ಸುಟ್ಟಿಕೊಂಡಿದ್ದಾರೆ. ಇವರಲ್ಲಿ 114 ಮಂದಿ ಹತ್ತಿ ಬೆಳೆ, 110 ಮಂದಿ ಕಬ್ಬು ಬೆಳೆ, 91 ಮಂದಿ ಬತ್ತ, 90 ಮಂದಿ ಮುಸುಕಿನ ಜೋಳ, 56 ಮಂದಿ ರಾಗಿ ಮತ್ತು ಮಿಶ್ರ ಬೆಳೆ, 44 ಮಂದಿ ತೊಗರಿ ಬೆಳೆ, 31 ಮಂದಿ ಹೊಗೆ ಸೊಪ್ಪು, 29 ಮಂದಿ ಶೇಂಗಾ ಬೆಳೆದು ಕೈಸುಟ್ಟುಕೊಂಡ ಕಾರಣಕ್ಕೆ ಆತ್ಮಹತ್ಯೆ ಶರಣಾಗಿದ್ದಾರೆ. ಆಶ್ಚರ್ಯವೆಂದರೆ ಮೂಲತಃ ರೈತರಾಗಿದ್ದೂ ಯಾವುದೇ ಬೆಳೆ ಬೆಳೆಯದೆ ಸತ್ತವರು 126 ಮಂದಿ ಇದ್ದರೆ, ಯಾವುದೇ ಮಾಹಿತಿ ಲಭ್ಯವಿಲ್ಲದವರು 116 ಮಂದಿ ರೈತರ ಪಟ್ಟಿಗೆ ಗುರುತಿಸಿಕೊಂಡಿದ್ದಾರೆ!
ಯಾವ ಕಾರಣಕ್ಕೆ ತಿರಸ್ಕೃತ: ಕಂದಾಯ ಇಲಾಖೆ ಮಾಹಿತಿ ಪ್ರಕಾರ 1002 ಮಂದಿ ರೈತರ ಪೈಕಿ 275 ಪ್ರಕರಣಗಳು ತಿರಸ್ಕೃತಗೊಂಡಿವೆ. ಇದಕ್ಕೆ ಕಾರಣವನ್ನೂ ತಿಳಿಸಿರುವ ಇಲಾಖೆ ಸ್ವಂತ ಹೆಸರಿನಲ್ಲಿ ಸಾಲ ಮಾಡದಿರುವುದು, ಸ್ವಂತ ಹೆಸರಲ್ಲಿ ಭೂಮಿ ಹೊಂದದಿರುವುದು, ವೈಯಕ್ತಿಕ ಸಮಸ್ಯೆಗೆ ಕೃಷಿ ಸಾಲ, ಕೌಟುಂಬಿಕ ಸಮಸ್ಯೆಯಿಂದ ಅಸು ನೀಗಿರುವುದು, ರೈತರಾಗಿರದ ಕಾರಣಕ್ಕೆ ಗುರುತಿಸಿಕೊಂಡಿರುವುದು, ಬ್ಯಾಂಕಿನಿಂದ ಯಾವುದೇ ನೋಟಿಸ್ ಪಡೆಯದಿರುವುದು ಸೇರಿ ಇನ್ನಿತರ ಕಾರಣಗಳಿಂದ ಈ ಪ್ರಕರಣಗಳನ್ನು ತಿರಸ್ಕರಿಸಲಾಗಿದೆ!
ಸರ್ಕಾರವೇ ಬಂದಿತ್ತು!: ರಾಜ್ಯದಲ್ಲಿ ರೈತರ ಸರಣಿ ಸಾವು ಸದ್ದು ಮಾಡುತ್ತಿದ್ದಂತೆ ಆಡಳಿತರೂಢ ಕಾಂಗ್ರೆಸ್ ಸೇರಿದಂತೆ ಇನ್ನಿತರ ಪಕ್ಷಗಳ ಗಮನ ರೈತರತ್ತ ಸರಿಯಿತು. ಬಿಜೆಪಿ ರೈತ ಚೈತನ್ಯ ಯಾತ್ರೆ ಮಾಡಿ ರಾಜ್ಯಾ ದ್ಯಂತ ಸುತ್ತಾಡಲು ಆರಂಭಿಸಿದರೆ, ಜೆಡಿಎಸ್ ಉತ್ತರ ಕರ್ನಾಟಕದಲ್ಲಿ ಪಾದ ಯಾತ್ರೆ ನಡೆಸಿತು. ಈ ಪಕ್ಷಗಳಿಗೆ ಸಮರ್ಥವಾಗಿ ಉತ್ತರ ಕೊಡಬೇಕು ಎಂದೇ ಕೆಪಿಸಿಸಿಯು ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ ಅವರ ನ್ನು ಅ.9 ರಂದು ಮಂಡ್ಯಕ್ಕೆ ಹಾಗೂ 10 ರಂದು ಹಾವೇರಿಗೆ ಕರೆಸಿತು. ಹರಿಯಾಣ, ಉತ್ತರ ಪ್ರದೇಶದ, ತೆಲಂಗಾಣ ರೈತರ ಸಮಸ್ಯೆ ಆಲಿಸಿ ಕರ್ನಾಟಕಕ್ಕೆ ಮುಖ ಮಾಡದೆ ಹೋಗಿದ್ದ ರಾಹುಲ್ ಆ ಅಪವಾದವನ್ನು ದೂರ ಮಾಡಿದರು.
ಸರ್ಕಾರದ ಸ್ಪಂದನೆ: ರಾಜ್ಯದಲ್ಲಿ ಸಂಭವಿಸಿದ ರೈತರ ಸರಣಿ ಸಾವಿಗೆ ಬೆದರಿದ ಸಿದ್ದರಾಮಯ್ಯ ಸರ್ಕಾರ ಮೊದಲಿಗೆ ನುಣುಚಿಕೊಳ್ಳಲು ಪ್ರಯತ್ನಿಸಿದರೂ ನಂತರ ಪ್ರಕರಣಗಳು ಗಂಭೀರತೆ ಸೃಷ್ಟಿಸುತ್ತಿದ್ದಂತೆ ತತ್ತರಿಸಿ ಹೋದರು. ಎಲ್ಲಿ ಹೋದರು ರೈತರ ಆಕ್ರಂದನ ಹೆಚ್ಚಾಗುತ್ತಿತ್ತೆ ವಿನಃ ಇಂದಿಗೂ ಕಡಿಮೆಯಾಗಿಲ್ಲ. ಆದರೂ ತಾವು ರೈತಪರ ಎಂಬ ಉಕ್ತಿಯನ್ನು ಭದ್ರವಾಗಿ ಒತ್ತಿ ಹೇಳಲು ರಾಹುಲ್ ಗಾಂಧಿಯೆೀ ಸಮ್ಮುಖ ವಹಿಸ ಬೇಕಾಯಿತು. ಅ.10 ರಂದು ಹಾವೇರಿಯಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ನೀಡುತ್ತಿದ್ದ ಪರಿಹಾರ ರು.2 ರಿಂದ ರು.5 ಲಕ್ಷಕ್ಕೆ ಏರಿಕೆ, ಮೃತ ರೈತರ ಮಕ್ಕಳ ಸ್ನಾತಕೋತ್ತರ ವಿದ್ಯಾ ಭ್ಯಾಸದ ತನಕದ ವೆಚ್ಚ ಸರ್ಕಾರದಿಂದ ಪಾವತಿ, ರೈತರ ಅಲ್ಪ, ಮಧ್ಯಮ, ದೀರ್ಘಾವಧಿ ಸಾಲದ ಮೇಲಿನ ಎಲ್ಲಾಬಡ್ಡಿ, ಸುಸ್ತಿ ಬಡ್ಡಿ ಮನ್ನಾ, ರೈತ ಕುಟುಂಬಗಳಿಗೆ ಸರ್ಕಾರದಿಂದ ಜೀವವಿಮೆ, ಮೃತ ರೈತರ ಪತ್ನಿಯ ವಿಧವಾ ಮಾಶಾಸನ ರು.500 ರಿಂದ ರು.2 ಸಾವಿರಕ್ಕೆ ಏರಿಸಿ ಹೊಸ ವ್ಯಾಖ್ಯಾನ ಬರೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics