ನವದೆಹಲಿ: ಗಣರಾಜ್ಯೋತ್ಸವ ಆಚರಣೆಯ ವೇಳೆ ಇಸ್ಲಾಮಿಕ್ ಸ್ಟೇಟ್ ಉಗ್ರರು ಭಾರತದ ಮೇಲೆ ದಾಳಿ ನಡೆಸಲು ಸಂಚು ಹೂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಫ್ರಾನ್ಸ್ ಅಧ್ಯಕ್ಷ ಫ್ರಾನ್‌ಕೋಯ್ಸ್ ಹೊಲ್ಲಾಂಡ್ ಅವರು ಅತಿಥಿಯಾಗಿ ಭಾಗವಹಿಸಲಿದ್ದು, ದೇಶದಾದ್ಯಂತ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.
ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ಗೆ ಇಸಿಸ್‌ನಿಂದ ಬೆದರಿಕೆಯಿದೆ ಎಂದು ಗುಪ್ತಚರ ಇಲಾಖೆ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಈ ಬೆದರಿಕೆ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳು ಆದಷ್ಟು ಕಟ್ಟೆಚ್ಚರ ವಹಿಸಬೇಕೆಂದು ಕೇಂದ್ರ ಸರ್ಕಾರ ಆದೇಶ ನೀಡಿದೆ.ಇಸಿಸ್ ಉಗ್ರ ಸಂಘಟನೆಗಳು ದೇಶದಲ್ಲಿ ಲೋನ್ ವೂಲ್ಫ್ ಅಟ್ಯಾಕ್ ಎಂಬ ಹೆಸರಲ್ಲಿ ದಾಳಿ ನಡೆಸುವ ಸಾಧ್ಯತೆಯಿದ್ದು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಾಗಿದೆ ಎಂದು ಕೇಂದ್ರ ಹೇಳಿದೆ.
ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ನೇತೃತ್ವದಲ್ಲಿ 13 ರಾಜ್ಯಗಳ ಪೊಲೀಸ್ ಅಧಿಕಾರಿಗಳು, ತನಿಖಾ ಅಧಿಕಾರಿಗಳು ಮತ್ತು ಕೇಂದ್ರ ರಹಸ್ಯ ದಳದ ಅಧಿಕಾರಿಗಳ ನಡುವೆ ಶವಿವಾರ ನಡೆದ ಸಭೆಯಲ್ಲಿ ಈ ದಾಳಿ ಬಗ್ಗೆ ಚರ್ಚಿಸಲಾಗಿತ್ತು.
ಇಸಿಸ್‌ನಿಂದ ಬೆದರಿಕೆಯಿರುವುದು ನಿಜ. ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕಟ್ಟೆಚ್ಚರ ವಹಿಸಬೇಕಾಗಿದೆ. ದೇಶದ ಯಾವ ಮೂಲೆಯಲ್ಲಿ ಬೇಕಾದರೂ ಲೋನ್ ವೂಲ್ಫ್ ಅಟ್ಯಾಕ್ ನಡೆಯಬಹುದು. ಆದ್ದರಿಂದ ಜಾಗ್ರತೆಯಿಂದಿರಿ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಲೋನ್ ವೂಲ್ಫ್ ಹಿಂದೆ ಸಿರಾಜುದ್ದೀನ್ ಕೈವಾಡ?
ಇಂಡಿಯನ್ ಆಯಿಲ್ ಕಾರ್ಪೊರೇಷವ್‌ನ ಎಕ್ಸಿಕ್ಯೂಟಿವ್ ಮೊಹಮ್ಮದ್ ಸಿರಾಜುದ್ದೀನ್ ಎಂಬಾತನನ್ನು 2015 ಡಿಸೆಂಬರ್ ನಲ್ಲಿ ಜೈಪುರದಲ್ಲಿ ಬಂಧಿಸಲಾಗಿತ್ತು. ಈತ ಭಾರತೀಯ ಯುವಕರನ್ನು ಮಧ್ಯಪ್ರಾಚ್ಯದ ಉಗ್ರ ಸಂಘಟನೆಗಳಿಗೆ ಸೇರಿಸುವ ಮತ್ತು ಆನ್‌ಲೈನ್‌ನಲ್ಲಿ ಇಸಿಸ್ ಕೃತ್ಯಗಳನ್ನು ಪಸರಿಸುವ ಕ್ರಿಯೆಯನ್ನು ಮಾಡುತ್ತಿದ್ದ ಎಂಬ ಆರೋಪವಿದೆ. ಈತನಿಗೆ ಲೋನ್ ವೂಲ್ಫ್ ದಾಳಿ ಸಂಚಿನಲ್ಲಿ ಕೈವಾಡವಿದೆ ಎಂದು ಶಂಕಿಸಲಾಗುತ್ತಿದೆ.