ನವದೆಹಲಿ: ಮತದಾರರಿಗೆ ಇತರ ಪಕ್ಷಗಳಿಂದ ಲಂಚ ಪಡೆದು ಎಎಪಿ ಪಕ್ಷಕ್ಕೆ ಮತ ಹಾಕಿ ಎಂದು ಕರೆ ಕೊಟ್ಟಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದೆ.
ಕೇಜ್ರಿವಾಲ್ ವಿರುದ್ಧ ಕ್ರಮ ಜರುಗಿಸುವಂತೆ ಕೋರಿದ್ದ ಮನವಿಯನ್ನು ವಜಾಗೊಳಿಸಿರುವ ಮೆಟ್ರೊಪಾಲಿಟನ್ ಮೆಜೆಸ್ಟ್ರೆಟ್ ಬಬ್ರು ಭಾನ್ "ಆಪಾದಿತ ಮತದಾರರಿಗೆ ಯಾವುದೇ ಲಂಚದ ಆಮಿಷ ಒಡ್ಡಿಲ್ಲ ಬದಲಾಗಿ ಇತರ ಪಕ್ಷಗಳು ಒಡ್ಡುವ ಆಮಿಷದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಕೋರಿ ಅವರು ಮತದಾರಾರಿಗೆ ಯಾವುದೇ ಲಂಚ ನೀಡಿಲ್ಲ" ಎಂದು ಅವರು ಹೇಳಿದ್ದಾರೆ.
ಕೇಜ್ರಿವಾಲ್ ಅವರ ಈ ಹೇಳಿಕೆ ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾದದ್ದು ಮತ್ತು ಇದು ಜನರಿಗೆ ರಾಜಕಾರಣಿಗಳಿಂದ ಲಂಚ ಸ್ವೀಕರಿಸಲು ಚಿತಾವಣೆ ನೀಡುತ್ತದೆ ಎಂದು ದೂರಿ ಇಕ್ರಾಂತ್ ಶರ್ಮಾ ಎನ್ನುವವರು ದೂರಿದ್ದರು.
ಆಮ್ ಆದ್ಮಿ ಪಕ್ಷ ದೆಹಲಿ ವಿಧಾನ ಸಭಾ ಚುನಾವಣೆಗಳನ್ನು ಅಭೂತಪೂರ್ವಾಗಿ ಗೆದ್ದಿದ್ದ ಒಂದು ತಿಂಗಳ ನಂತರ ಈ ದೂರು ನೀಡಲಾಗಿತ್ತು.