ಬೆಂಗಳೂರು: ಬೆಂಗಳೂರು ಅರಮನೆ ಮೈದಾನದಲ್ಲಿ ಫೆಬ್ರವರಿ 3ರಿಂದ 5ರವರೆಗೆ ನಡೆಸಲು ಉದ್ದೇಶಿಸಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಸಿದ್ಧತೆ ಭರದಿಂದ ಸಾಗುತ್ತಿದ್ದು, ಬೃಹತ್ ಕೈಗಾರಿಕಾ ಸಚಿವ ಅರ್ ವಿ ದೇಶಪಾಂಡೆ ಬುಧವಾರ ಸ್ಥಳ ಪರಿಶೀಲಿಸಿದರು.
ಮೂರು ವರ್ಷಗಳ ಬಳಿಕ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಆಗಮಿಸುವ ಗಣ್ಯ ಹೂಡಿಕೆದಾರರನ್ನು ಸ್ವಾಗತಿಸಲು ರಾಜಧಾನಿ ಬೆಂಗಳೂರಿನ ಪ್ರಮುಖ ರಸ್ತೆಗಳ ಸುಧಾರಣಾ ಕಾರ್ಯ ಮಾಡಲಾಗುತ್ತಿದೆ. ಐಟಿ-ಬಿಟಿ ಸಚಿವ ಎಸ್.ಆರ್. ಪಾಟೀಲ್, ಕೃಷಿ ಸಚಿವ ಕೃಷ್ಣಬೈರೇಗೌಡ, ಜವಳಿ ಸಚಿವ ಬಾಬುರಾವ್ ಚಿಂಚನಸೂರ್, ಮೇಯರ್ ಮಂಜುನಾಥರೆಡ್ಡಿ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಅರಮನೆ ಮೈದಾನದಲ್ಲಿನ ಸಮಾವೇಶ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.
ಇದೇ ವೇಳೆ ಪ್ರಮುಖ ವೇದಿಕೆ, ಪ್ರದರ್ಶನ ಮಳಿಗೆಗಳು ಎಲ್ಲೆಲ್ಲಿ, ಹೇಗೆ ನಿರ್ಮಾಣವಾಗಲಿವೆ ಎಂಬ ಕುರಿತು ಮಾಹಿತಿ ಪಡೆದು, ಸಚಿವರು ನಿರ್ದೇಶನಗಳನ್ನು ನೀಡಿದರು.
ಬಳಿಕ ವಿಮಾನ ನಿಲ್ದಾಣ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ರೆಸಿಡೆನ್ಸಿ ರಸ್ತೆ, ರಿಚ್ಮಂಡ್ ವೃತ್ತ, ಕಬ್ಬನ್ ಪಾರ್ಕ್, ಮಹಾತ್ಮಗಾಂಧಿ ರಸ್ತೆ, ರೇಸ್‌ಕೋರ್ಸ್ ರಸ್ತೆ ಮತ್ತಿತರ ಕಡೆಗಳಲ್ಲಿ ಸಂಚರಿಸಿ ಅಲ್ಲಿ ನಡೆಯುತ್ತಿರುವ ರಸ್ತೆಗಳ ಡಾಂಬರೀಕರಣ ಮತ್ತು ಇತರೆ ಕಾಮಗಾರಿಗಳ ಕುರಿತು ಮೇಯರ್ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು. ಐಟಿ-ಬಿಟಿ ಸಚಿವ ಎಸ್.ಆರ್. ಪಾಟೀಲ್, ಮೇಯರ್ ಮಂಜುನಾಥ ರೆಡ್ಡಿ, ಅಧಿಕಾರಿಗಳಾದ ವಿಜಯಭಾಸ್ಕರ್, ಕುಮಾರ ನಾಯಕ್ ಮತ್ತಿತರರಿದ್ದರು.
ಬೃಹತ್ ವೇದಿಕೆ
ಸಮಾವೇಶ ನಡೆಯಲಿರುವ ಅರಮನೆ ಆವರಣದಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ದೇಶ- ವಿದೇಶಗಳಿಂದ ಆಗಮಿಸುವ ಹೂಡಿಕೆದಾರರಿಗಾಗಿ ಸುಮಾರು 2,500 ಮಂದಿಗೆ ಆಸನ ವ್ಯವಸ್ಥೆ ಜತೆಗೆ ಭವ್ಯ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಕೃಷಿ, ಆಹಾರ, ಪ್ರವಾಸೋದ್ಯಮ, ವಿಮಾನಯಾನ ಸೇರಿ ಒಟ್ಟು 14 ವಲಯಗಳ ಸಣ್ಣ ಮತ್ತು ದೊಡ್ಡ ಉದ್ಯಮಗಳ ವಸ್ತುಪ್ರದರ್ಶನಕ್ಕೆ 1 ಲಕ್ಷ ಚದರಡಿ ವಿಸ್ತೀರ್ಣದಲ್ಲಿ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳ ಜತೆಗೆ 14 ಅಧಿವೇಶನಗಳಿಗೂ ಅಗತ್ಯ ವೇದಿಕೆ ನಿರ್ಮಿಸಲಾಗುತ್ತಿದೆ ಎಂದು ಮೇಲ್ವಿಚಾರಕರು ತಿಳಿಸಿದರು.